ತನ್ನ ನಿರ್ಧಾರದಿಂದ ಜನರು ಜೀವ ಕಳೆದುಕೊಂಡಿದ್ದನ್ನು ಮೋದಿ ದೇಶ ಸೇವೆಯೆಂದು ಭಾವಿಸಿದ್ದಾರೆ : ದೇವನೂರು

ಕುಪ್ಪಳ್ಳಿ , ಡಿ.29 : ದೇಶದ ಪ್ರಧಾನಿ ನರೇಂದ್ರ ಮೋದಿಯವರು ತನ್ನ ನಿರ್ಧಾರದದಿಂದ ಜನರು ಜೀವ ಕಳೆದುಕೊಂಡಿದ್ದನ್ನು ದೇಶ ಸೇವೆಯೆಂದು ಭಾವಿಸಿದ್ದಾರೆ ಎಂದು ಹೇಳುವ ಮೂಲಕ ಹಿರಿಯ ಲೇಖಕ ದೇವನೂರು ಮಹಾದೇವ ನೋಟ್ ಬ್ಯಾನ್ ನಿರ್ಧಾರವನ್ನು ಟೀಕಿಸಿದ್ದಾರೆ.
ಕುಪ್ಪಳ್ಳಿಯಲ್ಲಿ ಜರುಗಿದ ಕುವೆಂಪು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ದಕ್ಷಿಣ ಅಮೇರಿಕಾದ ವೆನಿಜುವೆಲಾ ದೇಶದಲ್ಲೂ ಕರೆನ್ಸಿ ಬದಲಾವಣೆ ಆಯ್ತು. ಅಲ್ಲಿ ಕ್ಷೋಭೆ ಉಂಟಾಯ್ತು. ಹತ್ತಾರು ಜನರೂ ಸತ್ತರು. ನಿಯಂತ್ರಿಸಲಾರದೆಯೋ,ಅಥವಾ ತನ್ನ ಪ್ರಜೆಗಳ ಜೀವಕ್ಕೆ ಬೆಲೆ ಕೊಟ್ಟೋ ಅದೇನೆ ಇರಲಿ ವೆನಿಜುವೆಲಾ ಅಧ್ಯಕ್ಷ ತನ್ನ ನಿರ್ಧಾರವನ್ನು ಹಿಂದೆಗೆದುಕೊಂಡ. ಆ ದೇಶದ ಅಧ್ಯಕ್ಷ ಸರ್ವಾಧಿಕಾರಿಯಾಗಿದ್ದ ಅನ್ನುವುದು ನೆನಪಿರಲಿ .
ಆದರೆ ಭಾರತದಲ್ಲಿ ಜನ ನೋಟು ಬದಲಾವಣೆ ಸಂಕಷ್ಟವನ್ನು ಸಹಿಸಿಕೊಂಡರು. ನೂರಾರು ಜನ ಕ್ಯೂ ನಿಂತು ಜೀವ ಕಳೆದುಕೊಂಡರು. ಕೆಲವರು ಇದನ್ನು ಒಳ್ಳೆ ಸಾವು ಅಂದುಕೊಂಡಿರಲೂಬಹುದು. ಒಟ್ಟಿನಲ್ಲೂ ಭಾರತೀಯರು ಇದನ್ನು ಸಹಿಸಿಕೊಂಡರು. ನೆನಪಿರಲಿ, ಭಾರತದ ಪ್ರಧಾನಿ ಸರ್ವಾಧಿಕಾರಿ ಅಲ್ಲ: ಜನಪ್ರತಿನಿಧಿ. ತನ್ನ ಪ್ರಜೆಗಳು ತನ್ನ ನಿರ್ಧಾರದ ಕಾರಣವಾಗಿ ಜೀವ ಕಳೆದುಕೊಂಡಿದ್ದನ್ನು ದೇಶ ಸೇವೆಯೆಂದು ಅವರು ಭಾವಿಸಿದಂತೆ ಕಾಣುತ್ತಿದೆ. ಇದು ಅರ್ಥವಾಗದೆ ಒದ್ದಾಡುತ್ತಿರುವೆ ಎಂದು ತಮ್ಮ ಆತಂಕವನ್ನು ವ್ಯಕ್ತಪಡಿಸಿದರು.
ಜಾತಿ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಾ , ಭಾರತ ಜಾತಿಯ ಪಿಡುಗು ಎದುರಿಸುತ್ತಿದೆ. ಜಾತಿ ಟೌನ್ ಶಿಪ್ ಗಳು ತಲೆ ಎತ್ತುತ್ತಿವೆ. ವಿಪ್ರ ಟೌನ್ ಶಿಪ್,ಲಿಂಗಾಯಿತ ಟೌನ್ ಶಿಪ್ ಇತ್ಯಾದಿ..ಈ ರೋಗ ಇತರರಿಗೂ ಹರಡಬಹುದು.ಜಾತಿ ಟೌನ್ ಶಿಪ್ ಅಪಾಯಕಾರಿ.ದೇಶ ವಿದ್ಯಾವಂತರಾದರೆ ಜಾತಿ ವ್ಯವಸ್ಥೆ ಹೋಗುತ್ತೆ ಅಂದುಕೊಂಡಿದ್ದೆವು, ಆದರೆ ಜಾತಿ ಟೌನ್ ಶಿಪ್ ಎಲ್ಲೆಡೆ ಆಗುತ್ತಿರುವಿದು ಬಹಳ ಅಪಾಯಕಾರಿಯಾಗಿದೆ ಎಂದರು.
ಸಮಾಜ ಒಳಗೊಳ್ಳದೆ ಊರಾಚೆ ಬದುಕುವ ಅವಮಾನಿತ ಅಸ್ಪೃಶ್ಯರು, ಕಾಡಲ್ಲಿ ಜೀವಿಸುತ್ತಿರುವ ನಮಗೆಲ್ಲಾ ಮೂಲನಿವಾಸಿಗಳಾದ ಆದಿವಾಸಿಗಳು, ಜೊತೆಗೆ ಊರನ್ನೂ ಸೇರದೆ ಅಲೆದಾಡುವ ಅಲೆಮಾರಿಗಳನ್ನು ಒಳಗೊಂಡು ಐಕ್ಯ ಭಾರತವನ್ನು ಕಟ್ಟುವತ್ತ ಇರುವ ಒಂದು ಸಣ್ಣ ಹೆಜ್ಜೆ ಮೀಸಲಾತಿ. ಈ ಬಗ್ಗೆ ಇಲ್ಲಿ ಅಸಹನೆ ಕುದಿಯುತ್ತಿದೆ. ಭಾರತದ ಜಾತ್ಯಸ್ಥ ಮನಸ್ಸು ಎಲ್ಲಿ ಸಹಿಸಿಕೊಳ್ಳಬಾರದೋ ಅಲ್ಲಿ ಸಹಿಸಿಕೊಳ್ಳುತ್ತಿದೆ. ಎಲ್ಲಿ ಸಹಿಸಿಕೊಳ್ಳಬೇಕೋ ಅಲ್ಲಿ ಅಸಹನೆ ಕುದಿಯುತ್ತಿದೆ. ನಮ್ಮ ಸಂವೇದನೆ ಏನಾಗಿದೆ? ಭಾರತವು ತನ್ನ ಸಂವೇದನಾಹೀನತೆಯ ಕುಷ್ಠ ಲಕ್ಷಣವನ್ನೆ ಪರಂಪರೆ ಸಂಸ್ಕೃತಿ ಅಂತ ಅದರ ಸುತ್ತ ಸುತ್ತುತ್ತಿದೆ. ಇಂಥಲ್ಲಿ ಕುಟುಕು ಜೀವದಲ್ಲಿ ಉಸಿರಾಡುತ್ತುರುವ ಭಾರತದ ಸಂವೇದನಾಶೀಲ ಸಂಸ್ಕೃತಿ ಪರಂಪರೆಗಳನ್ನು ನಮ್ಮ ಉಳುವಿಗೆ ಉಳಿಸಿಕೊಳ್ಳಬೇಕಾಗಿದೆ. ಅದು ಹೇಗೆ? ಎಂದು ಪ್ರಶ್ನಿಸಿದರು.
ಒಳ ಜಗತ್ತಿನ ಮಾರಕ ಸಂಬಂಧಗಳು ಹೊರ ಜಗತ್ತಿನಲ್ಲಿ ಅಂಟಿಕೊಂಡು ಅಪಾಯವುಂಟು ಮಾಡುತ್ತಿವೆ. ಕನ್ನಡ ಕನ್ನಡಿಗರ ಕಾಲ್ತುಳಿತಕ್ಕೆ ಸಿಲುಕಿ ತೊಳಲಾಡ್ತಿದೆ. ಕನ್ನಡಿಗರಿಗೆ ಭಾಷಾಭಿಮಾನ ಇಲ್ಲದಾಗಿದೆ. ಮಾತೃಭಾಷೆ ಶಿಕ್ಷಣದ ಬಗ್ಗೆ ನ್ಯಾಯಾಲಯದ ತೀರ್ಪು ಸಮಾಧಾನ ತಂದಿಲ್ಲ. ಸ್ಥಳೀಯ ಭಾಷೆಯ ಶಿಕ್ಷಣದ ಬಗ್ಗೆ ಸರ್ಕಾರ ಉತ್ತಮ ನಿಲುವು ತಾಳಬೇಕು ಎಂದು ಭಾಷಾ ಮಾಧ್ಯಮದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.







