ನಗದು ರಹಿತ ವೇತನ ಪಾವತಿಗೆ ಸರಕಾರವೀಗ ಉದ್ಯಮಗಳ ಪಟ್ಟಿ ಮಾಡಬಹುದು!

ಹೊಸದಿಲ್ಲಿ, ಡಿ.29: ಉದ್ಯೋಗದಾತರು ಚೆಕ್ ಅಥವಾ ವಿದ್ಯುನ್ಮಾನ ಸಾಧನಗಳ ಮೂಲಕ ತಮ್ಮ ಉದ್ಯೋಗಿಗಳ ಖಾತೆಗಳಿಗೆ ವೇತನವನ್ನು ಜಮಾ ಮಾಡಲು ಅನುಕೂಲವಾಗುವಂತೆ ಸಂಬಳ ಪಾವತಿ(ತಿದ್ದುಪಡಿ) ಅಧ್ಯಾದೇಶ-2016ರ ಮೂಲ ಕಾಯ್ದೆಯ ಸೆ.6ಕ್ಕೆ ತಿದ್ದುಪಡಿ ಮಾಡಲಾಗಿದೆ.
ನಗದುರಹಿತ ಸಮಾಜದತ್ತ ದೇಶವನ್ನು ಒಯ್ಯಲಿರುವ, ಹೊಸದಾಗಿ ಅಧಿಸೂಚಿತ ಅಧ್ಯಾದೇಶವು, ಉದ್ಯೋಗಿಗಳಿಗೆ ಚೆಕ್ ಅಥವಾ ಬ್ಯಾಂಕ್ ಖಾತೆಗೆ ಜಮೆ ಮಾಡುವ ಮೂಲಕ ಸಂಬಳ ಪಾವತಿಸಬೇಕಾದ ಕೈಗಾರಿಕೆಗಳು ಹಾಗೂ ಸಂಸ್ಥೆಗಳನ್ನು ವರ್ಗೀಕರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಅವಕಾಶ ಒದಗಿಸಿದೆ.
ಸಂಬಳ ಪಾವತಿ ಕಾಯ್ದೆ-1936ರ ತಿದ್ದುಪಡಿ ಅಧ್ಯಾದೇಶವು ನಿನ್ನೆ ಅಧಿಸೂಚಿಸಲ್ಪಟ್ಟ ಬಳಿಕ ಈ ನೆಲದ ಕಾನೂನಾಗಿದೆ. ವೇತನವನ್ನು ಇಲೆಕ್ಟ್ರಾನಿಕ್ ವಿಧಾನ ಅಥವಾ ಚೆಕ್‌ಗಳ ಮೂಲಕ ಪಾವತಿಸುವಂತೆ ನಿರ್ದಿಷ್ಟ ಉದ್ಯಮಗಳ ಉದ್ಯೋಗದಾತರನ್ನು ಮೆಲ್ಲಗೆ ಮುಂದೂಡುವುದಕ್ಕಾಗಿ ಇದನ್ನು ತರಲಾಗಿದೆಯೆಂದು ಮೂಲವೊಂದು ತಿಳಿಸಿದೆ.
ಈ ಅಧ್ಯಾದೇಶವು ನಗದುರಹಿತ ಸಮಾಜಕ್ಕೆ ದಾರಿ ಮಾಡಿಕೊಡುವುದಲ್ಲದೆ, ನೌಕರರು ನಗದಾಗಿ ಸಂಬಳ ಪಡೆಯುವಲ್ಲಿ ಆಗುವ ವೇತನ ಕಡಿತ ನಿವಾರಣೆಗೆ ಸಹಾಯ ಮಾಡುತ್ತದೆ. ಇದಕ್ಕಿಂತಲೂ ಹೆಚ್ಚಾಗಿ, ಈ ನೌಕರರನ್ನು ಇಪಿಎಫ್‌ಒ ಹಾಗೂ ಇಎಸ್‌ಐಸಿಗಳು ನಡೆಸುವ ಸಾಮಾಜಿಕ ಭದ್ರತಾ ಯೋಜನೆಗಳ ಜಾಲದೊಳಗೆ ತರಲು ಕಾರ್ಮಿಕ ಸಚಿವಾಲಯಕ್ಕೆ ಇದು ನೆರವಾಗುತ್ತದೆಂದು ಅವು ಹೇಳಿವೆ.







