‘ನಾವು ಗುಲಾಮರಲ್ಲ ’12 ಗಂಟೆ ದುಡಿಮೆ ವಿರುದ್ಧ ನೋಟು ಮುದ್ರಣ ಘಟಕದ ನೌಕರರ ಗುಟುರು

ಕೋಲ್ಕತಾ,ಡಿ.29: ಹೊಸ ನೋಟುಗಳ ಬೇಡಿಕೆಯನ್ನು ಪೂರೈಸಲು ನ.14ರಿಂದ ನಿರಂತರವಾಗಿ ದಿನಕ್ಕೆ 12 ಗಂಟೆಗಳ ಕಾಲ ದುಡಿದು ಬಸವಳಿದಿರುವ ಪ.ಬಂಗಾಲದ ಸಾಲ್ಬೋನಿಯ ಆರ್‌ಬಿಐ ನೋಟು ಮುದ್ರಣ ಘಟಕದ ನೌಕರರು ಪ್ರತಿ ಶಿಫ್ಟ್‌ನಲ್ಲಿ ಒಂಭತ್ತು ಗಂಟೆಗೂ ಹೆಚ್ಚು ಅವಧಿಗೆ ದುಡಿಯಲು ನಿರಾಕರಿಸಿದ್ದಾರೆ. ‘ನಾವು ಗುಲಾಮರಲ್ಲ, ನಮಗೂ ನಮ್ಮ ಕುಟುಂಬ ಜೀವನ ಇದೆ ’ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ದೇಶದಲ್ಲಿಯ ನಾಲ್ಕು ನೋಟು ಮದ್ರಣ ಘಟಕಗಳ ಲ್ಲೊಂದಾಗಿದೆ.
ನೋಟು ರದ್ದತಿಯ ಬಳಿಕ ಸುದೀರ್ಘ ಅವಧಿಯ ಕೆಲಸದಿಂದಾಗಿ ಹೆಚ್ಚಿನ ನೌಕರರು ಅನಾರೋಗ್ಯಕ್ಕೆ ಗುರಿಯಾಗಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್‌ನ ಹಿಡಿತದಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈ.ಲಿ.ನ ಕಾರ್ಮಿಕ ಒಕ್ಕೂಟವು ಹೇಳುವುದರೊಂದಿಗೆ ಪರಿಸ್ಥಿತಿಯು ಇನ್ನಷ್ಟು ಜಟಿಲಗೊಂಡಿದೆ.
ನೋಟುಗಳ,ವಿಶೇಷವಾಗಿ 100 ಮತ್ತು 500 ರೂ.ನೋಟುಗಳಿಗಾಗಿ ಭಾರೀ ಬೇಡಿಕೆಯನ್ನು ಪೂರೈಸಲು ಸಾಲ್ಬೋನಿ ಮತ್ತು ಮೈಸೂರು ಘಟಕಗಳ ನೌಕರರು ನ.14 ರಿಂದ ಪ್ರತಿ ಶಿಫ್ಟ್‌ನಲ್ಲಿಯೂ 12 ಗಂಟೆಗಳ ಕಾಲ ದುಡಿಯುತ್ತಿದ್ದಾರೆ. ಇದರಿಂದಾಗಿ ಹಲವರು ಅನಾರೋಗ್ಯಕ್ಕೆ ಗುರಿಯಾಗಿದ್ದಾರೆ. ಇದನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಕಾರ್ಮಿಕರ ಒಕ್ಕೂಟದ ಅಧ್ಯಕ್ಷ, ಕಾಂತಿಯ ತೃಣಮೂಲ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಶಿಶಿರ್ ಅಧಿಕಾರಿ ಹೇಳಿದ್ದಾರೆ.
ಸಾಲ್ಬೋನಿ ಘಟಕದ ಸುಮಾರು 700 ನೌಕರರು ಪ್ರತಿ ಶಿಫ್ಟ್‌ನಲ್ಲಿ ಮೂರು ಗಂಟೆಗಳ ಹೆಚ್ಚುವರಿ ಕೆಲಸವನ್ನು ಮಾಡಿ 9.6 ಕೋ.ರೂ.ವೌಲ್ಯದ 10 ರೂ.ನಿಂದ 2,000 ರೂ.ಮುಖಬೆಲೆಯ ನೋಟುಗಳನ್ನು ಮುದ್ರಿಸುತ್ತಿದ್ದಾರೆ. ಒಂಭತ್ತು ಗಂಟೆಗಳ ಶಿಫ್ಟ್‌ಗಾಗಿ ಅವರ ಬೇಡಿಕೆಯಿಂದಾಗಿ ಪ್ರತಿ ಶಿಫ್ಟ್‌ನಲ್ಲಿ ಮುದ್ರಿತ ನೋಟುಗಳ ವೌಲ್ಯ 2.8 ಕೋ.ರೂ.ಗಳಷ್ಟು ಕಡಿಮೆಯಾಗಲಿದೆ. ಇದು ಈಗಾಗಲೇ ನೋಟುಗಳ ಕೊರತೆಯಿಂದ ತತ್ತರಿಸಿರುವ ಮಾರುಕಟ್ಟೆಯಲ್ಲಿ ಇನ್ನಷ್ಟು ಹಾಹಾಕಾರವನ್ನು ಸೃಷ್ಟಿಸಲಿದೆ. ಸಾಲ್ಬೋನಿಯಲ್ಲಿ ಮುದ್ರಣಗೊಳ್ಳುವ ನೋಟುಗಳು ಪೂರ್ವ ಮತ್ತು ಈಶಾನ್ಯ ಭಾರತದ 12 ರಾಜ್ಯಗಳಿಗೆ ಪೂರೈಕೆಯಾಗುತ್ತಿವೆ.
‘ದೇಶಕ್ಕೆ ಭಾರೀ ಒಳಿತಾಗುತ್ತದೆ ’ಎಂದು ಪ್ರತಿ ದಿನ 12 ಗಂಟೆಗಳ ಕಾಲ ಕೆಲಸ ಮಾಡಲು ನಾವು ಗುಲಾಮರಲ್ಲ, ರೋಬೊಟ್‌ಗಳೂ ಅಲ್ಲ. ನಾವು ಮಾನವಜೀವಿಗಳು. ನಮಗೆ ವಿಶ್ರಾಂತಿ ಅಗತ್ಯ ಎನ್ನುತ್ತಾರೆ ನೌಕರರು.
ಕೆಲವು ಪ್ರಬಲ ವ್ಯಕ್ತಿಗಳ ತಪ್ಪು ನಿರ್ಧಾರಗಳಿಂದಾಗಿ ನಾವು ನಮ್ಮ ಕುಟುಂಬ ಜೀವನವನ್ನು ತ್ಯಾಗ ಮಾಡಲು ನಮ್ಮನ್ನು ಅವರು ಖರೀಸಿದಿಸಿಲ್ಲ ಎಂದು ಉದ್ಯೋಗಿ ಯೋರ್ವರು ಕಿಡಿ ಕಾರಿದರು.







