ಬಿ.ಸಿ.ರೋಡು : ಜ. 2ರಂದು ಹೆದ್ದಾರಿ ತಡೆಗೊಳಿಸಿ ಪ್ರತಿಭಟನೆ

ಬಂಟ್ವಾಳ, ಡಿ. 29: ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದ ಸಮೀಪ ರಸ್ತೆಯ ಎರಡೂ ಬದಿಯನ್ನು ಅಗಲೀಕರಣಗೊಳಿಸುವ ನಿಟ್ಟಿನಲ್ಲಿ ಸುಮಾರು ಎರಡೂವರೆಯಷ್ಟು ಅಗೆದು ಒಂದೂವರೆ ತಿಂಗಳು ಕಳೆದರೂ, ಇನ್ನೂ ಕೂಡ ಸುಸ್ಥಿತಿಗೆ ತಾರದಿರುವ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಾರ್ಯವೈಖರಿಯನ್ನು ಖಂಡಿಸಿ ಜ. 2ರಂದು ಹೆದ್ದಾರಿ ತಡೆಗೊಳಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಪಿ.ಎ.ರಹೀಂ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ತಹಶೀಲ್ದಾರ್, ಪುರಸಭೆ ಹಾಗೂ ಪೊಲೀಸ್ ಇಲಾಖೆಗೆ ಕೈಕಂಬ ಅಂಗಡಿ ಮಾಲಕರ ಹಾಗೂ ರಿಕ್ಷಾ ಚಾಲಕರ ನಿಯೋಗವೊಂದು ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಬಿ.ಸಿ.ರೋಡಿನ ಪ್ರೆಸ್ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ.
ಹತ್ತು ದಿನಗಳ ಹಿಂದೆಯಷ್ಟೇ ಸ್ಥಳೀಯ ಅಂಗಡಿ ಮಾಲಕರು ಹಾಗೂ ರಿಕ್ಷಾ ಚಾಲಕರು ಅಗೆದು ಹಾಕಿರುವ ರಸ್ತೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಎರಡು ಮೂರು ದಿನಗಳ ಒಳಗಾಗಿ ಸರಿಪಡಿಸುವ ಭರವಸೆ ನೀಡಿದ್ದರು. ಆದರೆ ಅದು ಈವರೆಗೂ ಈಡೇರದ ಹಿನ್ನೆಲೆಯಲ್ಲಿ ನಮ್ಮ ಹೋರಾಟವನ್ನು ತೀವ್ರಗೊಳಿಸಲಾಗುವುದು. ಜ.2ರಂದು ಸ್ಥಳೀಯ ವಿವಿಧ ಶಾಲಾಮಕ್ಕಳು, ಸಾರ್ವಜನಿಕರು, ರಿಕ್ಷಾಚಾಲಕರ ಸಹಕಾರದೊಂದಿಗೆ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಅಗೆದ ರಸ್ತೆಯನ್ನು ಸುಸ್ಥಿತಿಗೆ ತರುವ ವಿಚಾರದಲ್ಲಿ ಇಲಾಖೆಗಳ ನಡುವೆ ಸಮನ್ವತೆಯ ಕೊರತೆ ಇದ್ದು, ಸಾರ್ವಜನಿಕರು ಇದರಿಂದ ತೊಂದರೆ ಅನುಭವಿಸಬೇಕಾಗಿದೆ. ಸಚಿವರ ಸಹಿತ ವಿವಿಧ ಜನಪ್ರತಿನಿಧಿಗಳು ಇದೇ ದಾರಿಯಾಗಿ ಓಡಾಡುತ್ತಿದ್ದರೂ ಈ ರಸ್ತೆಯ ಬಗ್ಗೆ ಸಂಬಂಧಪಟ್ಟ ಇಲಾಖೆಯ ಕಿವಿ ಹಿಂಡುವ ಕೆಸಲ ಮಾಡುತ್ತಿಲ್ಲ ಎಂದು ಆರೋಪಿಸಿದ ಅವರು, ತಹಶೀಲ್ದಾರರು ಪುರಸಭೆಯತ್ತ ಬೊಟ್ಟು ಮಾಡಿದರೆ, ಪುರಸಭೆ ಟ್ರಾಫಿಕ್ ಎಸೈ ಚಂದ್ರಶೇಖರಯ್ಯರವರ ಮೇಲೆ ಬೆರಳು ತೋರಿಸುತ್ತಿದ್ದು, ಪ್ರಮುಖವಾಗಿ ಇದರ ಕಾರ್ಯನಿರ್ವಹಿಸಬೇಕಾಗಿದ್ದ ಹೆದ್ದಾರಿ ಇಲಾಖೆ ಇತ್ತ ತಲೆಹಾಕಿ ಮಲಗುತ್ತಿಲ್ಲ ಎಂದವರು ಆರೋಪಿಸಿದರು.
ರಸ್ತೆ ಅಗೆದ ಪರಿಣಾಮ ಸ್ಥಳೀಯ ಶಾಲಾಮಕ್ಕಳು, ಮಹಿಳೆಯರು ದಿನನಿತ್ಯ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಸಮರ್ಪಕ ಬಸ್ ಇಲ್ಲದೆ ಸಾರ್ವಜನಿಕರು ರಸ್ತೆಯಲ್ಲಿಯೇ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೈಕಂಬ ರಿಕ್ಷಾಚಾಲಕ ಸಂಘದ ಅಧ್ಯಕ್ಷ ಯಾಕೂಬು, ಎಸ್‌ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ಬಂಟ್ವಾಳ ಬ್ಯಾರಿ ಫೌಂಡೇಶನ್ ಉಪಾಧ್ಯಕ್ಷ ಕೆ.ಎಚ್.ಅಬೂಬಕರ್, ಪ್ರಮುಖರಾದ ಹಝರುದ್ದೀನ್ ಉಪಸ್ಥಿತರಿದ್ದರು.







