ಎಂಆರ್‌ಪಿಎಲ್ ರಸ್ತೆ ದುರಸ್ತಿ: ಚೆಕ್ ಹಸ್ತಾಂತರ

ಮಂಗಳೂರು, ಡಿ. 28: ಸುರತ್ಕಲ್‌ನಿಂದ ಎಂಆರ್‌ಪಿಎಲ್ ರಸ್ತೆ ದುರಸ್ತಿ ಕಾಮಗಾರಿಗೆ ಎಂಸಿಎಫ್ ಮತ್ತು ಎಂಆರ್‌ಪಿಎಲ್ ವತಿಯಿಂದ 35 ಲಕ್ಷ ರೂ. ಚೆಕ್‌ನ್ನು ಇಂದು ಪಾಲಿಕೆಯ ಸಮಿತಿ ಸಭಾಂಗಣದಲ್ಲಿ ಹಸ್ತಾಂತರಿಸಲಾಯಿತು.
ಸುರತ್ಕಲ್‌ನಿಂದ ಎಂಆರ್‌ಪಿಎಲ್‌ವರೆಗಿನ ಹದಗೆಟ್ಟ ರಸ್ತೆಯ ದುರಸ್ತಿಗೆ ಆಗ್ರಹಿಸಿ ಸ್ಥಳೀಯರ ನಾಗರಿಕರಿಂದ ಒತ್ತಾಯಗಳು ಕೇಳಿಬಂದಿದ್ದವು. ಈ ರಸ್ತೆ ದುರಸ್ತಿಗಾಗಿ ಎಂಸಿಎಫ್‌ನಿಂದ 15 ಲಕ್ಷ ರೂ. ಹಾಗೂ ಎಂಆರ್‌ಪಿಎಲ್‌ನಿಂದ 20 ಲಕ್ಷ ರೂ.ಗಳ ಒಟ್ಟು 35 ಲಕ್ಷ ರೂ. ಮೊತ್ತದ ಚೆಕ್‌ನ್ನು ಹಸ್ತಾಂತರಿಸಲಾಯಿತು. 1.6 ಕೋಟಿ ರೂ.ಗಳ ಈ ಯೋಜನೆಗೆ ಪಾಲಿಕೆಯ ವತಿಯಿಂದ ಶೇ. 45ರಷ್ಟು ಅನುದಾನ ಬಿಡುಗಡೆಗೊಳ್ಳಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮೊದಿನ್ ಬಾವ, ಸ್ಥಳೀಯರ ಹಲವು ದಿನಗಳ ಬೇಡಿಕೆಯಾಗಿರುವ ಸುರತ್ಕಲ್-ಎಂಆರ್‌ಪಿಎಲ್ ರಸ್ತೆ ದುರಸ್ತಿ ಕಾಮಗಾರಿ ಕೆಲಸವನ್ನು ವಾರದೊಳಗೆ ಕೈಗೊಳ್ಳುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮೇಯರ್ ಹರಿನಾಥ್, ಮನಪಾ ಆಯುಕ್ತ ಮುಹಮ್ಮದ್ ನಝೀರ್, ಎಂಆರ್‌ಪಿಎಲ್‌ನ ಎಚ್‌ಆರ್ ವಿಭಾಗದ ಮಹಾಪ್ರಬಂಧಕ ಬಿ.ಎಚ್.ವಿ.ಪ್ರಸಾದ್, ಡಿಜಿಎಂ ಪ್ರಶಾಂತ್ ಬಾಳಿಗಾ, ಎಂಸಿಎಫ್‌ನ ಮಹಾಪ್ರಬಂಧಕ ಜಯಶಂಕರ್ ರೈ, ನಿರ್ವಹಣೆ ವಿಭಾಗದ ಮಹಾಪ್ರಬಂಧಕ ಸೋಮಶೇಖರ್, ಪಿಆರ್‌ಓ ಅವಿನಂದನ್, ಕಾರ್ಪೊರೇಟರ್‌ಗಳಾದ ಶಶಿಧರ್ ಹೆಗ್ಡೆ, ಕವಿತಾ ಸನಿಲ್ ಮೊದಲಾದವರು ಉಪಸ್ಥಿತರಿದ್ದರು.







