ಗ್ರಾಮೀಣ ಪ್ರದೇಶಗಳಿಗೂ ಸೆಟ್‌ಟಾಪ್ ಬಾಕ್ಸ್ ಕಡ್ಡಾಯ: ಕುಮಾರ್

ಮಂಗಳೂರು, ಡಿ.29: ಜಿಲ್ಲೆಯಲ್ಲಿ ಕೇಬಲ್ ಸಂಪರ್ಕ ಸಂಪೂರ್ಣ ಡಿಜಿಟಲೀಕರಣ ಮಾಡುವ ಕುರಿತು ಎಲ್ಲ ಕೇಬಲ್ ಎಂಎಸ್‌ಓಗಳೊಂದಿಗೆ ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಮಟ್ಟದ ನೋಡೆಲ್ ಅಧಿಕಾರಿ (ಡಿಜಿಟೈಸೇಷನ್ ಆಫ್ ಕೇಬಲ್ ಟಿ ನೆಟ್‌ವರ್ಕ್) ಕುಮಾರ್‌ರ ಅಧ್ಯಕ್ಷತೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಿತು.
ಭಾರತ ಸರಕಾರ ದೇಶದೆಲ್ಲೆಡೆ ಕೇಬಲ್ ಟಿ. ಡಿಜಿಟೈಸೇಷನ್ ಕಡ್ಡಾಯಗೊಳಿಸಿದ್ದು, ಈಗಾಗಲೇ ಹಂತ 1, ಹಂತ 2 ಮತ್ತು ಹಂತ 3 ಸಂಪೂರ್ಣಗೊಂಡಿರುತ್ತದೆ. ಈಗ ಹಂತ 4ರಡಿಯಲ್ಲಿ ದೇಶದ ಗ್ರಾಮೀಣ ಪ್ರದೇಶಗಳ ಮನೆಗಳಲ್ಲಿರುವ ಕೇಬಲ್ ಸಂಪರ್ಕವನ್ನು ಡಿಜಿಟಲೀಕರಣಗೊಳಿಸುವ ಕಾರ್ಯವು ಚಾಲ್ತಿಯಲ್ಲಿರುತ್ತದೆ ಎಂದು ಕುಮಾರ್ ಹೇಳಿದರು.
3ನೆ ಹಂತದ ಡಿಜಿಟೈಸೇಷನ್ ಕಾರ್ಯವು ನಗರ ಪ್ರದೇಶವನ್ನು ಒಳಗೊಂಡಿದ್ದು, ಇದು ಮುಕ್ತಾಯದ ಹಂತಕ್ಕೆ ಬಂದಿದೆ. 3ನೆ ಹಂತದ ಡಿಜಿಟೈಸೇಷನ್ ಕಾರ್ಯ ಪೂರ್ಣಗೊಳಿಸಲು ಭಾರತ ಸರಕಾರವು 2016ರ ಡಿ.31ನ್ನು ಅಂತಿಮ ದಿನವನ್ನಾಗಿ ನಿಗದಿಪಡಿಸಿದೆ. ಜನವರಿ ಅಂತ್ಯದ ನಂತರ ಹಿಂದಿನ ಕೇಬಲ್ ಸಂಪರ್ಕದ ಅನಲಾಗ್ ಸಿಗ್ನಲ್ ಸ್ಥಗಿತಗೊಳ್ಳಲಿದೆ. 4ನೆ ಹಂತದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟೈಸೇಷನ್ ಕಾರ್ಯವನ್ನು ಕೈಗೆತ್ತಿಗೊಳ್ಳಲಾಗಿದ್ದು, ಈ ಕಾರ್ಯವನ್ನು 2017ರ ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಮಾರ್ಚ್ ತಿಂಗಳಿನಿಂದ ಅನಲಾಗ್ ಸಿಗ್ನಲ್ ಸ್ಥಗಿತಗೊಳಿಸಲಾಗುವುದಾಗಿ ಕೇಬಲ್ ನಿರ್ವಾಹಕ ಸಂಸ್ಥೆಗಳಿಗೆ ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.







