ತೀವ್ರಗೊಂಡ ಎಸ್‌ಪಿ ಆಂತರಿಕ ಬಿಕ್ಕಟ್ಟು ಬೆಂಬಲಿಗರನ್ನು ಭೇಟಿಯಾದ ಅಖಿಲೇಶ್

ಲಕ್ನೋ,ಡಿ.29: ಎಸ್‌ಪಿಯೊಳಗಿನ ಕುಟುಂಬ ಕಲಹ ಇನ್ನಷ್ಟು ಬಿಗಡಾಯಿಸಿ ರುವಂತಿದೆ. ಅಸಮಾಧಾನದಿಂದ ಬೇಯುತ್ತಿರುವ ಮುಖ್ಯಮಂತ್ರಿ ಅಖಿಲೇಶ ಯಾದವ ಅವರು ಪಕ್ಷವು ಪ್ರಕಟಿಸಿರುವ 325 ಘೋಷಿತ ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನವಂಚಿತಬ ರಾಗಿರುವ ಶಾಸಕರು ಮತ್ತು ಪಕ್ಷದ ಪದಾಧಿಕಾರಿಗಳೊಂದಿಗೆ ಇಂದು ಮಾತುಕತೆ ನಡೆಸಿದರಲ್ಲದೆ, ಪಟ್ಟಿಯ ಕುರಿತು ತನ್ನ ಆಕ್ಷೇಪವನ್ನು ತನ್ನ ತಂದೆ ಹಾಗೂ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ ಅವರಿಗೆ ತಿಳಿಸಿದ್ದಾರೆ. ಹಿರಿಯ ಯಾದವ ಅವರು ತನ್ನ ಸೋದರ ಹಾಗು ಎಸ್‌ಪಿ ರಾಜ್ಯಘಟಕದ ಅಧ್ಯಕ್ಷ ಶಿವಪಾಲ್ ಯಾದವ ಜೊತೆ ಬುಧವಾರ ಈ ಪಟ್ಟಿಯನ್ನು ಪ್ರಕಟಿಸಿದ್ದರು.
ಅಖಿಲೇಶ ಮತ್ತು ಮುಲಾಯಂ ನಿವಾಸಗಳ ಎದುರು ಪಕ್ಷದ ನಾಯಕರು ನೆರೆಯುವುದರೊಂದಿಗೆ ಬೆಳ್ಳಂಬೆಳಿಗ್ಗೆಯೇ ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭಗೊಂಡಿದ್ದವು. ಅತ್ತ ಶಿವಪಾಲ ನಿವಾಸದೆದುರೂ ದೊಡ್ಡ ಜನಸಂದಣಿಯಿತ್ತು.
ನಿನ್ನೆ ರಾಜ್ಯ ವಿಧಾನಸಭೆಯ 403 ಸ್ಥಾನಗಳ ಪೈಕಿ 325 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಸಂದರ್ಭ ಮುಲಾಯಂ ಅವರು ಅಖಿಲೇಶ್‌ರನ್ನು ಮುಖ್ಯಮಂತ್ರಿ ಹುದ್ದೆ ಅಭ್ಯರ್ಥಿಯೆಂದು ಬಿಂಬಿಸುವುದನ್ನು ತಳ್ಳಿಹಾಕಿದ್ದರು.
ತರಾತುರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದಾಗ ಅಖಿಲೇಶ ಬುಂದೇಲಖಂಡ್ ಪ್ರವಾಸದಲ್ಲಿದ್ದರು. ಕಳೆದ ಹಲವಾರು ತಿಂಗಳುಗಳಿಂದಲೂ ಅಖಿಲೇಶ್ ಮತ್ತು ಶಿವಪಾಲ್ ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ.







