ಬಿಜೆಪಿ ಸೇರುವ ವದಂತಿಗೆ ಸಚಿವ ಪ್ರಮೋದ್ ಪ್ರತಿಕ್ರಿಯೆ ಏನು ಗೊತ್ತೇ ?

ಉಡುಪಿ, ಡಿ.29: ತನ್ನನ್ನು ಬಿಜೆಪಿ ಪಕ್ಷದತ್ತ ಸೆಳೆಯಲು ಕೆಲವು ನಾಯಕರು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂಬ ಪತ್ರಿಕಾ ವರದಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ‘ಕುಚೇಷ್ಟೆ’ಯ ವರದಿ ಎಂದು ತಳ್ಳಿ ಹಾಕಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಈವರೆಗೆ ಯಾವುದೇ ಬಿಜೆಪಿ ನಾಯಕರನ್ನು ತನ್ನನ್ನು ಸಂಪರ್ಕಿಸಿಲ್ಲ. ಅಂಥ ಯಾವುದೇ ಬೆಳವಣಿಗೆ ನಡೆದೂ ಇಲ್ಲ. ಈ ವರದಿ ಸದ್ದುದ್ದೇಶದ್ದೊ ಅಥವಾ ದುರುದ್ದೇಶದ್ದೊ ಎಂಬುದು ತನಗೆ ಗೊತ್ತಿಲ್ಲ ಎಂದವರು ಹೇಳಿದರು.
ಬಿಜೆಪಿ ನಾಯಕರು ಎದುರು-ಬದುರಾದಾಗ ಉಭಯ ಕುಶಲೋಪಚಾರದ ಮಾತುಕತೆ ನಡೆಸುತ್ತೇವೆ. ಅದು ಬಿಟ್ಟು ರಾಜಕೀಯ ಮಾತಿನ ನಡುವೆ ಸುಳಿಯುವುದಿಲ್ಲ ಎಂದು ಪ್ರಮೋದ್ ಹೇಳಿದರು.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಬಿಜೆಪಿಗೆ ಸೇರುವ ಸಾಧ್ಯತೆ ಇದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಮೋದ್ ಮಧ್ವರಾಜ್‌ರನ್ನೆ ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಕುರಿತಂತೆ ಬಿಜೆಪಿ ಹಿರಿಯ ನಾಯಕರ ಮಧ್ಯೆ ಚರ್ಚೆ ನಡೆಯುತ್ತಿದೆ ಎಂದೂ ವದಂತಿಗಳು ಹೇಳುತ್ತಿದ್ದವು.
ಪ್ರಮೋದ್ ಮಧ್ವರಾಜ್‌ರವರ ತಾಯಿ, ಹಿರಿಯ ರಾಜಕಾರಣಿ ಮನೋರಮಾ ಮಧ್ವರಾಜ್‌ರೊಂದಿಗೆ ಬಿಜೆಪಿಯ ರಾಷ್ಟ್ರ ಹಾಗೂ ರಾಜ್ಯ ನಾಯಕರಿಗೆ ಇರುವ ಸಂಪರ್ಕಗಳು ಮತ್ತು ಬಿಜೆಪಿಯ ರಾಜ್ಯ ಮಟ್ಟದ ಕೆಲವು ಮುಖಂಡರೊಂದಿಗೆ ಪ್ರಮೋದ್ ಹೊಂದಿರುವ ಸೌಹಾರ್ದ ಸಂಬಂಧಗಳನ್ನು ಬಳಸಿಕೊಂಡು ಈ ಯತ್ನಕ್ಕೆ ಕೈ ಹಾಕಲಾಗಿದೆ ಮತ್ತು ಈ ಬೆಳವಣಿಗೆಯಲ್ಲಿ ಸ್ವತಃ ಯಡಿಯೂರಪ್ಪನವರ ಪ್ರಯತ್ನವಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ನಡೆಯುತ್ತಿದ್ದವು.
ಮಾತ್ರವಲ್ಲ , ಉಡುಪಿ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಈ ಬಗ್ಗೆ ಪ್ರಮೋದ್ ಮದ್ವರಾಜ್‌ರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆಂದು ಹೇಳುತ್ತಿದ್ದ ಸಂದೇಶಗಳು ಉಡುಪಿ ಕ್ಷೇತ್ರದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು.







