ಮುಲ್ಕಿಯಲ್ಲಿ ಸರಣಿ ಅಪಘಾತ
.jpg)
ಮುಲ್ಕಿ, ಡಿ. 29: ರಾಷ್ಟ್ರೀಯ ಹೆದ್ದಾರಿ 66ರ ಕೋಲ್ನಾಡು ಬಳಿಯಲ್ಲಿ ಲಾರಿ ಮತ್ತು ಕಂಟೈನರ್ ಮತ್ತು ಟಾಟಾ ಸುಮೋ ನಡುವೆ ಗುರುವಾರ ತಡರಾತ್ರಿ ನಡೆದ ಸರಣಿ ಅಪಘಾತದಲ್ಲಿ ಮೂವರು ಗಾಯಗೊಂಡು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಪಘಾತದಲ್ಲಿ ಗಾಯಗೊಂಡವರನ್ನು ಕಂಟೈನರ್ ಚಾಲಕ ತಮಿಳುನಾಡು ನಿವಾಸಿ ವೆಂಕಟೇಶ್(52), ಲಾರಿಯ ಚಾಲಕರಾದ ಮಹಾರಾಷ್ಟ್ರ ಮೂಲದ ದತ್ತಾತ್ರೇಯ ಮತ್ತು ವೆಂಕಟರಮಣ ಎಂದು ಗುರುತಿಸಲಾಗಿದೆ.
ಮಂಗಳೂರಿನಿಂದ ಪಡುಬಿದ್ರೆ ಕಂಪನಿಯ ಸಾಮಾನುಗಳನ್ನು ಕೊಂಡುಹೋಗುತ್ತಿದ್ದ ಕಂಟೈನರ್ ಪುಣೆಯಿಂದ ಮಂಗಳೂರು ಕಡೆಗೆ ನೀರುಳ್ಳಿ ಹೇರಿಕೊಂಡು ಹೋಗುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದಿದೆ. ಆ ವೇಳೆ ಕಂಟೈನರ್ ಚಾಲಕನ ನಿಯಂತ್ರಣ ತಪ್ಪಿ ಸುಮಾರು 10 ಅಡಿ ಆಳದ ಕಮರಿಗೆ ಉರುಳಿ ಬಿದ್ದಿದೆ.
ಅಪಘಾತದ ವೇಳೆ ಲಾರಿಯ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಹಿಂದಿನಿಂದ ಬರುತ್ತಿದ್ದ ಟಾಟಾ ಸುಮೋ ಲಾರಿಯ ಹಿಂಭಾಗಕ್ಕೆ ಢಿಕ್ಕಿ ಹೊಡೆದು ಜಖಂಗೊಂಡಿದೆ. ಅಪಘಾತದ ರಭಸಕ್ಕೆ ಲಾರಿ ಚಾಲಕನ ನಿಯಂತ್ರಣ ತಪ್ಪಿಹೆದ್ದಾರಿಯ ವಿಭಜಕವನ್ನು ಮೇಲೇರಿ ನಿಂತಿದೆ ಎಂದು ತಿಳಿದು ಬಂದಿದೆ.
ಅಪಘಾತದಿಂದ ಟಾಟಾ ಸುಮೋ ವಾಹನಕ್ಕೂ ಹಾನಿಯಾಗಿದ್ದು ಚಾಲಕ ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
ತಪ್ಪಿದ ಹೆಚ್ಚಿನ ಅನಾಹುತ:
ಕಂಟೈನರ್ ಪಲ್ಟಿಯಾದ ಸ್ಥಳದಲ್ಲಿ ಸ್ಥಳೀಯ ನಿವಾಸಿ ದಿನೇಶ್ ಕೋಲ್ನಾಡು ಎಂಬವರ ಮನೆ ಹಾಗೂ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ವಾಹನ ಕೂದಲೆಳೆಯ ಅಂತರದಿಂದ ಪಾರಾಗಿದೆ.
ಹೆದ್ದಾರಿ ಸಂಚಾರ ಅಸ್ತವ್ಯಸ್ತ:
ಅಪಘಾತದಿಂದ ಹೆದ್ದಾರಿ ಸಂಚಾರ ಸುಮಾರು ಎರಡು ಗಂಟೆಗಳ ಕಾಲ ಅಸ್ತವ್ಯಸ್ತಗೊಂಡಿತ್ತು. ಸುರತ್ಕಲ್ ಸಂಚಾರಿ ಪೊಲೀಸರು ಇನ್ಸ್‌ಪೆಕ್ಟರ್ ಮಂಜುನಾಥ್ ಮತ್ತು ಸಿಬ್ಬಂದಿ ಸುಗಮ ಸಂಚಾರಕ್ಕೆ ಹರಸಾಹಸ ಪಡಬೇಕಾಯಿತು.
ಅಪಾಯಕಾರಿ ದ್ವಿಮುಖ ರಸ್ತೆ:
ಮುಲ್ಕಿಗೆ ಬರುವ ತುಂಬೆ ನೀರಿನ ಪೈಪ್‌ಲೈನ್ ರಾಷ್ಟ್ರೀಯ ಹೆದ್ದಾರಿಯ ಅಡಿಯಲ್ಲಿ ಅಳವಡಿಸಲಾಗಿದೆ. ಇದು ಕಳೆದ ಹಲವು ದಿನಗಳಿಂದ ಸೋರುತ್ತಿರುವ ಕಾರಣ ಹೆದ್ದಾರಿಯನ್ನು ಅಗೆದು ದುರಸ್ತಿ ಕಾರ್ಯನಡೆಸಲಾಗುತ್ತಿದೆ. ಈ ಕಾರಣದಿಂದಾಗಿ ಕೋಲ್ನಾಡಿನಿಂದ ಪಡುಪಣಂಬೂರು ವರೆಗೆ ಏಕಮುಖ ಹೆದ್ದಾರಿಯನ್ನು ದ್ವಿಮುಖ ರಸ್ತೆಯನ್ನಾಗಿ ಮಾಡಲಾಗಿದೆ. ಇದರಿಂಗಾಗಿ ಪ್ರತೀ ದಿನ ಅಪಘಾತಗಳು ನಡೆಯುತ್ತಿರುತ್ತವೆ ಎಂದು ಸ್ಥಳೀಯರು ದೂರಿದ್ದಾರೆ.







