ಪ್ರವಾದಿ ಉಪದೇಶ ಜೀವನದಲ್ಲಿ ಅಳವಡಿಸಿಕೊಳ್ಳಿ: ಉಸ್ಮಾನ್ ಜೌಹರಿ

ಮಂಗಳೂರು, ಡಿ. 29: ಪ್ರವಾದಿಯವರ ಉಪದೇಶಗಳನ್ನು ಅರ್ಥಮಾಡಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಸಮಾಜದ ಅಭಿವೃದ್ಧಿ ಅವರ ಗುರಿಯಾಗಿತ್ತು. ಅದುವೇ ನಮ್ಮಗುರಿ ಕೂಡಾ ಆಗಬೇಕು ಎಂದು ಮದನಿನಗರ ಖತೀಬ್ ಉಸ್ಮಾನ್ ಜೌಹರಿ ನೆಲ್ಯಾಡಿ ಹೇಳಿದರು.
ಅವರು ಎಸ್ಸೆಸ್ಸೆಫ್ ಮೋಂಟುಗೋಳಿ ಶಾಖೆ ಇದರ ಆಶ್ರಯದಲ್ಲಿ ಬುಧವಾರ ಮೋಂಟುಗೋಳಿ ಗೌಸಿಯಾ ಮಸೀದಿ ಬಳಿ ನಡೆದ ಸ್ಫಟಿಕ ಮಹೋತ್ಸವಕ್ಕೆ ಚಾಲನೆ, ಹುಬ್ಬುರ್ರಸೂಲ್ ಕಾನ್ಫರೆನ್ಸ್ ಮತ್ತು ಎಸ್ಸೆಸ್ಸೆಫ್ ರಾಷ್ಟ್ರೀಯ ಪ್ರ. ಕಾರ್ಯದರ್ಶಿ ಸಿದ್ದೀಕ್ ಮೋಂಟುಗೋಳಿಯವರ ಹುಟ್ಟೂರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಧಾರ್ಮಿಕ ರಂಗದಲ್ಲಿ ಉತ್ತಮ ಸೇವೆ ಮಾಡಿ ಎಸ್ಸೆಸೆಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಿದ್ದೀಕ್ ಮೋಂಟುಗೋಳಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ತಂಙಳ್ ಕಿಲ್ಲೂರು ರವರು ಅಬೂಬಕರ್ ಸಿದ್ದೀಕ್‌ರವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಸಂಘಟನೆಯ ಕಾರ್ಯಚಟುವಟಿಕೆ ಮಾಡುವವ ಎಂದಿಗೂ ಒಂಟಿಯಾಗಲಾರ. ಅವನಿಗೆ ಎಲ್ಲೂ ಹೋದರೂ ರಕ್ಷಣೆ ಇದೆ, ಗೌರವ ಇದೆ ಎಂದರು.
ಎಸ್ಸೆಸ್ಸೆಫ್ ಮೋಂಟುಗೋಳಿ ಶಾಖೆಯ ಅಧ್ಯಕ್ಷ ಟಿ.ಎಂ. ಮುಸ್ತಫಾ ಸಖಾಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮೋಂಟುಗೋಳಿ ಮಸೀದಿಯ ಖತೀಬ್ ಅಬ್ದುಲ್ ಹಮೀದ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅಬ್ಬಾಸ್ ಸಖಾಫಿ ಮಡಿಕೇರಿ, ಗೌಸಿಯಾ ಮದ್ರಸ ಸದರ್ ಹಬೀಬುರ್ರಹ್ಮಾನ್ ಅಹ್ಸನಿ, ಮುಅಲ್ಲಿಂಗಳಾದ ಅಶ್ರಫ್ ಹನೀಫಿ, ಪಿ.ಎ. ಇಬ್ರಾಹೀಂ ಮುಸ್ಲಿಯಾರ್, ಮೋಂಟುಗೋಳಿ ಮಸೀದಿ ಅಧ್ಯಕ್ಷ ಎಂ.ಎಸ್. ಸುಲೈಮನ್, ಕೋಶಧಿಕಾರಿ ಪಿಎಂ. ಹೈದರ್ ಪಾರೆ ಮೊದಲಾದವರು ಉಪಸ್ಥಿತರಿದ್ದರು.
ಕೆ.ಎಂ. ಮುಸ್ತಫಾ ನಈಮಿ ಸ್ವಾಗತಿಸಿದರು. ಟಿ.ಐ.ಮುಹಮ್ಮದ್ ಹಾರಿಸ್ ಸಖಾಫಿ ವಂದಿಸಿದರು.







