ನೋಟು ರದ್ದತಿಯ ಬಳಿಕ ಕಾಂಗ್ರೆಸ್ ನಾಯಕತ್ವ ಹತಾಶ: ಪ್ರಧಾನಿ ಮೋದಿ

ಹೊಸದಿಲ್ಲಿ,ಡಿ.29: ನೋಟು ಅಮಾನ್ಯದ ತನ್ನ ಕಠಿಣ ನಿರ್ಧಾರದಿಂದಾಗಿ ಕಾಂಗ್ರೆಸ್ ನಾಯಕತ್ವವು ಹತಾಶಗೊಂಡಿದೆ ಎಂದು ಇಂದು ಆಪಾದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರತಿಪಕ್ಷವು ಸಂಸತ್ ಕಲಾಪಗಳನ್ನು ವ್ಯತ್ಯಯಗೊಳಿಸುವ ಮೂಲಕ ಅಪ್ರಾಮಾಣಿಕರನ್ನು ರಕ್ಷಿಸಲು ಸಂಘಟಿತ ಪ್ರಯತ್ನವೊಂದನ್ನು ಮಾಡಿರುವುದು ಇದೇ ಮೊದಲ ಬಾರಿಯಾಗಿದೆ ಎಂದು ಹೇಳಿದರು.
ನೋಟು ರದ್ದತಿ ಕ್ರಮವನ್ನು ‘ಬೃಹತ್ ದುರಾಡಳಿತ ’ ಮತ್ತು ‘ಸಂಘಟಿತ ಲೂಟಿ’ ಎಂದು ಬಣ್ಣಿಸಿದ್ದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರನ್ನೂ ತೀವ್ರ ತರಾಟೆ ಗೆತ್ತಿಕೊಂಡ ಅವರು, ತನ್ನ ಪೂರ್ವಾಧಿಕಾರಿಯು ಅವರ ನಾಯಕತ್ವದಡಿ ನಡೆದಿದ್ದ 2ಜಿ, ಸಿಡಬ್ಲೂಜಿ ಮತ್ತು ಕಲ್ಲಿದ್ದಲು ಗಣಿ ಹಂಚಿಕೆಯಂತಹ ‘ಅಂತ್ಯವಿಲ್ಲದ ಸರಣಿ ಹಗರಣಗಳನ್ನು ’ಪ್ರಸ್ತಾಪಿಸಿದ್ದಿರಬಹುದು ಎಂದು ವ್ಯಂಗ್ಯವಾಡಿದರು.
ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮೋದಿ, ಪ್ರಾಮಾಣಿಕರಿಗೆ ಕಿರುಕುಳ ನೀಡುವುದಿಲ್ಲ. ಕಪ್ಪುಹಣ ಹೊಂದಿರುವವರು ಇನ್ನು ಕೆಲವೇ ದಿನಗಳಷ್ಟೇ ಬಚ್ಚಿಟ್ಟು ಕೊಳ್ಳಬಹುದು, ಆದರೆ ಅವರನ್ನು ನುಣುಚಿಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದರು.
‘‘ನಮ್ಮ ಕೆಲವು ವಿರೋಧಿಗಳು...ವಿಶೇಷವಾಗಿ ಕಾಂಗ್ರೆಸ್ ನಾಯಕತ್ವವು ಪ್ರದರ್ಶಿಸು ತ್ತಿರುವ ಹತಾಶೆಯ ಬಗ್ಗೆ ನನಗೆ ಮರುಕವಿದೆ. ಕಾಂಗ್ರೆಸ್ ನಾಯಕರ ತಲೆಯಲ್ಲಿ ಕೇವಲ ಚುನಾವಣೆಯೇ ತುಂಬಿಕೊಂಡಿದೆ ಎಂದರು.
ನೋಟು ಅಮಾನ್ಯ ನಿರ್ಧಾರದಲ್ಲಿ ರಾಜಕೀಯವೇನೂ ಇಲ್ಲ. ಅದು ನಮ್ಮ ಆರ್ಥಿಕತೆ ಮತ್ತು ನಮ್ಮ ಸಮಾಜವನ್ನು ಸ್ವಚ್ಛಗೊಳಿಸಲು ಕೈಗೊಂಡ ಕಠಿಣ ನಿರ್ಧಾರವಾಗಿತ್ತು. ಅಲ್ಪಾವಧಿಯ ಚುನಾವಣಾ ರಾಜಕೀಯ ನನ್ನ ಮನಸ್ಸಿನಲ್ಲಿದ್ದಿದ್ದರೆ ನಾನು ನೋಟು ಅಮಾನ್ಯಗೊಳಿಸುತ್ತಲೇ ಇರಲಿಲ್ಲ ಎಂದು ಮೋದಿ ನುಡಿದರು.
ನೋಟು ಅಮಾನ್ಯ ಕ್ರಮವು ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರಕ್ಕೆ ಅಂತ್ಯ ಹಾಡಲಿದೆಯೇ ಎಂಬ ಪ್ರಶ್ನೆಗೆ, ಅದಕ್ಕೆ ನಿರ್ಣಾಯಕ ಕ್ರಮಗಳು ಅಗತ್ಯವಾಗಿವೆ ಎಂದು ಮೋದಿ ಉತ್ತರಿಸಿದರು. ರಾಜಕೀಯ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯವಿದೆ ಎಂದರು.







