ವಿಭಜನೆಯ ಅಂಚಿನಲ್ಲಿ ಎಸ್‌ಪಿ:ಅಭ್ಯರ್ಥಿಗಳ ಸಮಾನಾಂತರ ಪಟ್ಟಿ ಘೋಷಿಸಿದ ಅಖಿಲೇಶ್

ಲಕ್ನೋ,ಡಿ.30: ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಮುಂಬರುವ ವಿಧಾನಸಭಾ ಚುನಾವಣೆಗಾಗಿ ತನ್ನ ತಂದೆ ಹಾಗೂ ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ ಅವರು ಪ್ರಕಟಿಸಿರುವ ಪಕ್ಷದ ಅಭ್ಯರ್ಥಿಗಳ ಅಧಿಕೃತ ಪಟ್ಟಿಗೆ ವಿರುದ್ಧವಾಗಿ 235 ಕ್ಷೇತ್ರಗಳಿಗೆ ತನ್ನದೇ ಆದ ಅಭ್ಯರ್ಥಿಗಳನ್ನು ಗುರುವಾರ ರಾತ್ರಿ ಪ್ರಕಟಿಸಿದ್ದಾರೆ. ಅಖಿಲೇಶ್‌ರ ಈ ಬಹಿರಂಗ ಬಂಡಾಯ ಆಡಳಿತ ಎಸ್‌ಪಿಯನ್ನು ವಿಭಜನೆಯ ಅಂಚಿಗೆ ತಳ್ಳಿದೆ.
ಬುಧವಾರ ಮುಲಾಯಂ ಪ್ರಕಟಿಸಿದ್ದ ಅಧಿಕೃತ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದ ಪಕ್ಷದ ಶಾಸಕರು ಅಖಿಲೇಶ್ ಆಯ್ಕೆ ಮಾಡಿರುವ ಹೆಸರುಗಳ ಪಟ್ಟಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಲಭ್ಯವಾಗಿಸಿದ್ದಾರೆ.
ಮುಲಾಯಂರಿಂದ ಟಿಕೆಟ್ ನಿರಾಕರಿಸಲ್ಪಟ್ಟಿದ್ದ ಅಖಿಲೇಶ್‌ರ ಕಟ್ಟಾ ಬೆಂಬಲಿಗ ಸಚಿವರಾದ ಅರವಿಂದ ಸಿಂಗ್ ಗೋಪೆ, ಪವನ್ ಪಾಂಡೆ ಮತ್ತು ರಾಮ ಗೋವಿಂದ ಚೌಧರಿ ಅವರು ಈ ಪಟ್ಟಿಯಲ್ಲಿರುವ ಪ್ರಮುಖರಾಗಿದ್ದಾರೆ. ಮುಲಾಯಂ ಅವರು ಪ್ರಕಟಿಸಿದ್ದ ಪಟ್ಟಿಯಲ್ಲಿ ಸ್ಥಾನವಂಚಿತರಾಗಿದ್ದ ಶಾಸಕರು ಸೇರಿದಂತೆ ತನಗೆ ನಿಷ್ಠರಾಗಿರುವವರ ಜೊತೆ ಅಖಿಲೇಶ್ ಸಭೆ ನಡೆಸಿದ ಕೆಲವೇ ಗಂಟೆಗಳ ನಂತರ ಈ ಪಟ್ಟಿ ಹೊರಬಿದ್ದಿದೆ. ಉ.ಪ್ರ.ವಿಧಾನಸಭೆಯು 403 ಸ್ಥಾನಗಳನ್ನು ಹೊಂದಿದೆ.
ತಾನು ಆಕ್ಷೇಪಿಸಿದ್ದ ಕೆಲವರು ಸೇರಿದಂತೆ ಮುಲಾಯಂ ಪ್ರಕಟಿಸಿದ್ದ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಅಖಿಲೇಶ್ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.







