ಶಹಬಾಝ್ ನದೀಮ್ ಚೊಚ್ಚಲ ಪ್ರವೇಶ ಸಾಧ್ಯತೆ
ಇಂಗ್ಲೆಂಡ್ ವಿರುದ್ಧ ಟ್ವೆಂಟಿ-20 ಸರಣಿ

ಹೊಸದಿಲ್ಲಿ, ಡಿ.29: ರವೀಂದ್ರ ಜಡೇಜ ಹಾಗೂ ಅಕ್ಷರ್ ಪಟೇಲ್ ಅನುಪಸ್ಥಿತಿಯಲ್ಲಿ ಮುಂಬರುವ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ ಕ್ರಿಕೆಟ್ ಸರಣಿಗೆ ಜಾರ್ಖಂಡ್‌ನ ಎಡಗೈ ಸ್ಪಿನ್ನರ್ ಶಹಬಾಝ್ ನದೀಮ್ ಆಯ್ಕೆಯಾಗುವ ಸಾಧ್ಯತೆ ಅಧಿಕವಿದೆ.
ಅಕ್ಷರ್ ಪಟೇಲ್ ಬೆರಳಿನ ಗಾಯದಿಂದ ಬಳಲುತ್ತಿದ್ದರೆ, ಜಡೇಜಗೆ ವಿಶ್ರಾಂತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಈ ವರ್ಷದ ರಣಜಿ ಟ್ರೋಫಿಯಲ್ಲಿ 50 ವಿಕೆಟ್‌ಗಳನ್ನು ಉರುಳಿಸಿ ಗರಿಷ್ಠ ವಿಕೆಟ್ ಪಡೆದಿದ್ದ ನದೀಮ್ ಮುಂಬರುವ ಸೀಮಿತ ಓವರ್ ಕ್ರಿಕೆಟ್ ಸರಣಿ(3 ಏಕದಿನ ಹಾಗೂ 3 ಟ್ವೆಂಟಿ-20)ಆಡುವ ಅವಕಾಶ ಪಡೆಯುವ ಸಾಧ್ಯತೆಯಿದೆ.
ನದೀಮ್ 2015-16ರ ಸಾಲಿನ ರಣಜಿ ಟ್ರೋಫಿಯಲ್ಲೂ 9 ಪಂದ್ಯಗಳಲ್ಲಿ 51 ವಿಕೆಟ್‌ಗಳನ್ನು ಕಬಳಿಸಿದ್ದರು.
ಕಳೆದ ಎರಡು ರಣಜಿ ಋತುವಿನಲ್ಲಿ 100ಕ್ಕೂ ಅಧಿಕ ವಿಕೆಟ್‌ಗಳನ್ನು ಪಡೆದಿರುವ ನದೀಮ್‌ರನ್ನು ಆಯ್ಕೆಗಾರರು ನಿರ್ಲಕ್ಷಿಸುವಂತಿಲ್ಲ. ನದೀಮ್ ಕಳೆದ ಒಂದು ದಶಕದಿಂದ ದೇಶೀಯ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದಾರೆ.
ನದೀಮ್ ಕೆಲವು ಐಪಿಎಲ್ ಪಂದ್ಯಗಳು ಸೇರಿದಂತೆ ಈತನಕ 83 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದು, 6.59ರ ಇಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಭಾರತದ ಅಗ್ರ ಆಟಗಾರರು ಇಂಗ್ಲೆಂಡ್ ವಿರುದ್ಧದ 50 ಓವರ್ ಮಾದರಿ ಕ್ರಿಕೆಟ್‌ನಲ್ಲಿ ಆಡುವ ಸಾಧ್ಯತೆಯಿದೆ.
ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿಗೆ ಮೊದಲು ಇದು ಕೊನೆಯ ಏಕದಿನ ಸರಣಿಯಾಗಿದೆ. ಮುಂದಿನ ವರ್ಷಾರಂಭದಲ್ಲಿ ಆಸ್ಟ್ರೇಲಿಯ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿರುವ ಹಿನ್ನೆಲೆಯಲ್ಲಿ ಜಡೇಜ ಏಕದಿನ ಸರಣಿಯಲ್ಲಿ ಆಡಿ ಟ್ವೆಂಟಿ-20 ಟೂರ್ನಿಗಳಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.
ಕಳೆದ ಎರಡು ವರ್ಷಗಳಿಂದ ಪ್ರತಿ ವಿಭಾಗದಲ್ಲಿ ಸ್ಪೆಷಲಿಸ್ಟ್ ಆಟಗಾರರನ್ನು ಗುರುತಿಸಲಾಗುತ್ತಿದೆ. ಟೀಮ್ ಮ್ಯಾನೇಜ್‌ಮೆಂಟ್ ಬರಿಂದರ್ ಸ್ರಾನ್‌ರಂತಹ ಎಡಗೈ ವೇಗದ ಬೌಲರ್‌ನ್ನು ನಿರೀಕ್ಷಿಸುತ್ತಿದ್ದರೂ ತಂಡದ ಆಯ್ಕೆಯು ಯೋಜನೆಯಂತೆಯೇ ನಡೆಯುತ್ತಿದೆ. ಜನವರಿಯಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿಯಲ್ಲಿ ಸ್ರಾನ್‌ರನ್ನು ಆಯ್ಕೆ ಮಾಡಿ ಅಚ್ಚರಿ ಮೂಡಿಸಲಾಗಿತ್ತು.
ತಂಡದ ಎಡಗೈ ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ಜಡೇಜ ಎಲ್ಲ ಮೂರು ಮಾದರಿ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದಾರೆ. ಜಡೇಜಗೆ ವಿಶ್ರಾಂತಿ ನೀಡಿದ ಸಂದರ್ಭದಲ್ಲಿ ಜಡೇಜರ ಬದಲಿಗೆ ಅಕ್ಷರ್ ಪಟೇಲ್ ಆಡುತ್ತಿದ್ದರು.
ಪಟೇಲ್ ಇಂಗ್ಲೆಂಡ್ ವಿರುದ್ಧ ಸರಣಿಯಿಂದ ಹೊರಗುಳಿದಿರುವ ಹಿನ್ನೆಲೆಯಲ್ಲಿ ನದೀಮ್‌ಗೆ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗುವ ಅಪೂರ್ವ ಅವಕಾಶವಿದೆ. ಭಾರತದ ಸೀಮಿತ ಓವರ್ ನಾಯಕ ಎಂಎಸ್ ಧೋನಿ ಅವರಿಗೆ ತಮ್ಮದೆ ರಾಜ್ಯದ 27ರ ಪ್ರಾಯದ ನದೀಮ್‌ರ ಸಾಮರ್ಥ್ಯದ ಬಗ್ಗೆ ಅರಿವು ಇರುವ ಕಾರಣ ಅವರನ್ನು ತಂಡಕ್ಕೆ ಆಯ್ಕೆ ಮಾಡಲು ಶಿಫಾರಸು ಮಾಡಬಹುದು.







