ದ್ವಿತೀಯ ಟೆಸ್ಟ್: ಅಲ್ಪ ಮುನ್ನಡೆಯಲ್ಲಿ ಆಸ್ಟ್ರೇಲಿಯ
ಸ್ಟೀವನ್ ಸ್ಮಿತ್ ಆಕರ್ಷಕ ಶತಕ

ಮೆಲ್ಬೋರ್ನ್, ಡಿ.29: ನಾಯಕ ಸ್ಟೀವನ್ ಸ್ಮಿತ್ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ಆಸ್ಟ್ರೇಲಿಯ ತಂಡ ಪಾಕಿಸ್ತಾನ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅಲ್ಪ ಮುನ್ನಡೆ ಸಾಧಿಸಿದೆ.
ನಾಲ್ಕನೆ ದಿನವಾದ ಗುರುವಾರವೂ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಈ ನಡುವೆ ಆಕರ್ಷಕ ಶತಕ ಬಾರಿಸಿದ ಸ್ಮಿತ್ ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ನಷ್ಟಕ್ಕೆ 465 ರನ್ ಗಳಿಸಿ 22 ರನ್ ಮುನ್ನಡೆ ಪಡೆಯಲು ನೆರವಾಗಿದ್ದಾರೆ.
ಸ್ಮಿತ್ 17ನೆ ಶತಕ(ಅಜೇಯ 100, 168 ಎಸೆತ, 9 ಬೌಂಡರಿ)ಪೂರೈಸಿದ ಬೆನ್ನಿಗೆ ಎಂಸಿಜಿ ಸ್ಟೇಡಿಯಂನಲ್ಲಿ ಭಾರೀ ಮಳೆ ಸುರಿಯಿತು. ಪರಿಣಾಮ ಪಂದ್ಯವನ್ನು 5ನೆ ಹಾಗೂ ಅಂತಿಮ ದಿನವಾದ ಶುಕ್ರವಾರ ಮುಂದೂಡಲ್ಪಟ್ಟಿತು.
ಕೊನೆಯ ದಿನವಾದ ಶುಕ್ರವಾರ ಮಳೆಯ ಕಾಟವಿಲ್ಲದಿದ್ದರೆ ಆಸ್ಟ್ರೇಲಿಯ ಮುನ್ನಡೆಯನ್ನು ಹಿಗ್ಗಿಸಿಕೊಂಡು ಪಾಕ್ ಬ್ಯಾಟ್ಸ್‌ಮನ್‌ಗೆ ಗೆಲ್ಲಲು ಕಠಿಣ ಸವಾಲು ನೀಡಲು ಎದುರುನೋಡುತ್ತಿದೆ. ಭೋಜನವಿರಾಮದ ಬಳಿಕ ಸೊಹೈಲ್‌ಖಾನ್ ಎಸೆತವನ್ನು ಬೌಂಡರಿಗೆ ಅಟ್ಟಿದ ಸ್ಮಿತ್ ಈವರ್ಷ 1000 ಟೆಸ್ಟ್ ರನ್ ಪೂರೈಸಿದರು.
ಶತಕ ವಂಚಿತ ಖ್ವಾಜಾ: ಇದಕ್ಕೆ ಮೊದಲು 2 ವಿಕೆಟ್ ನಷ್ಟಕ್ಕೆ 278 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯ ತಂಡದ ಅಗ್ರ ಸರದಿಯದಾಂಡಿಗ ಉಸ್ಮಾನ್ ಖ್ವಾಜಾ ನಿನ್ನೆಯ ಮೊತ್ತಕ್ಕೆ ಕೇವಲ 2 ರನ್ ಸೇರಿಸಿ 97ರನ್‌ಗೆ ಔಟಾದರು.ಕೇವಲ 3 ರನ್‌ನಿಂದ ಆರನೆ ಶತಕ ವಂಚಿತರಾದರು. ಖ್ವಾಜಾ ನಿರ್ಗಮನದ ಬಳಿಕ ಸ್ಮಿತ್ ಹಾಗೂ ಪೀಟರ್ ಹ್ಯಾಂಡ್ಸ್‌ಕಾಂಬ್(54 ರನ್)4ನೆ ವಿಕೆಟ್‌ಗೆ 92 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.
ತಾನಾಡಿರುವ ಮೂರನೆ ಟೆಸ್ಟ್ ಪಂದ್ಯದಲ್ಲಿ ಮೂರನೆ ಬಾರಿ ಅರ್ಧಶತಕ ಬಾರಿಸಿರುವ ಹ್ಯಾಂಡ್ಸ್‌ಕಾಂಬ್ 90 ಎಸೆತಗಳಲ್ಲಿ 8 ಬೌಂಡರಿ ಸಹಿತ 54 ರನ್ ಗಳಿಸಿದ್ದಾಗ ಸೊಹೈಲ್ ಖಾನ್ ಎಸೆತದಲ್ಲಿ ಸಮಿ ಅಸ್ಲಾಮ್‌ಗೆ ನೇರ ಕ್ಯಾಚ್ ನೀಡಿ ನಿರ್ಗಮಿಸಿದರು.
ಕಳಪೆ ಫಾರ್ಮ್‌ನಿಂದ ಒತ್ತಡದಲ್ಲಿರುವ 6ನೆ ಕ್ರಮಾಂಕದ ಬ್ಯಾಟ್ಸ್‌ಮನ್ ನಿಕ್ ಮ್ಯಾಡಿನ್ಸನ್ 22 ರನ್ ಗಳಿಸಿ ಲೆಗ್ ಸ್ಪಿನ್ನರ್ ಯಾಸಿರ್ ಷಾಗೆ ವಿಕೆಟ್ ಒಪ್ಪಿಸಿದರು. ಮ್ಯಾಡಿನ್ಸನ್ ಔಟಾದ ತಕ್ಷಣ ವಿಕೆಟ್‌ಕೀಪರ್ ಮ್ಯಾಥ್ಯೂ ವೇಡ್(9) ಸೊಹೈಲ್ ಖಾನ್‌ಗೆ ವಿಕೆಟ್ ಒಪ್ಪಿಸಿದರು. ದಿನದಾಟದಂತ್ಯಕ್ಕೆ 7ನೆ ವಿಕೆಟ್‌ಗೆ 11 ರನ್ ಜೊತೆಯಾಟ ನಡೆಸಿರುವ ಸ್ಮಿತ್ ಹಾಗೂ ಸ್ಟಾರ್ಕ್ ಕ್ರೀಸ್ ಕಾಯ್ದುಕೊಂಡಿದ್ದರು.
ಪಾಕ್ ಪರವಾಗಿ ಸೊಹೈಲ್‌ಖಾನ್(2-86), ಯಾಸಿರ್ ಷಾ(2-150) ಹಾಗೂ ವಹಾಬ್ ರಿಯಾಝ್(2-135) ತಲಾ ಎರಡು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ ಪ್ರಥಮ ಇನಿಂಗ್ಸ್: 443/9 ಡಿಕ್ಲೇರ್
ಆಸ್ಟ್ರೇಲಿಯ ಪ್ರಥಮ ಇನಿಂಗ್ಸ್: 465/6
(ಡೇವಿಡ್ ವಾರ್ನರ್ 144, ಸ್ಮಿತ್ ಅಜೇಯ 100, ಉಸ್ಮಾನ್ ಖ್ವಾಜಾ 97, ಹ್ಯಾಂಡ್ಸ್‌ಕಾಂಬ್ 54, ಸೊಹೈಲ್ ಖಾನ್ 2-86, ರಿಯಾಝ್ 1-135, ಯಾಸಿರ್ ಷಾ 2-150)







