ಆಸ್ಟ್ರೇಲಿಯದ ಸಹಾಯಕ ಕೋಚ್ ಆಗಿ ಗಿಲೆಸ್ಪಿ ಆಯ್ಕೆ

ಸಿಡ್ನಿ, ಡಿ.29: ಮಾಜಿ ಟೆಸ್ಟ್ ವೇಗದ ಬೌಲರ್ ಜೇಸನ್ ಗಿಲೆಸ್ಪಿ ಗುರುವಾರ ಆಸ್ಟ್ರೇಲಿಯದ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಫೆಬ್ರವರಿಯಲ್ಲಿ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟ್ವೆಂಟಿ-20 ಇಂಟರ್‌ನ್ಯಾಶನಲ್ ಸರಣಿಯ ವೇಳೆ ಗಿಲೆಸ್ಪಿ ಆಸೀಸ್ ಕ್ರಿಕೆಟ್ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.
ಈ ತಿಂಗಳಾರಂಭದಲ್ಲಿ ಶ್ರೀಲಂಕಾ ವಿರುದ್ಧ ಸರಣಿಗೆ ಕೋಚ್ ಆಗಿರುವ ಜಸ್ಟಿನ್ ಲ್ಯಾಂಗರ್‌ರೊಂದಿಗೆ ಗಿಲೆಸ್ಪಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯ ಹೇಳಿದೆ.
ಬಿಗ್ ಬ್ಯಾಶ್ ಟ್ವೆಂಟಿ-20 ಲೀಗ್‌ನಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ತಂಡಕ್ಕೆ ಕೋಚ್ ಆಗಿದ್ದ ಗಿಲೆಸ್ಪಿ ಸತತ ಐದು ವರ್ಷಗಳ ಕಾಲ ಇಂಗ್ಲೆಂಡ್ ಕೌಂಟಿ ಯಾರ್ಕ್‌ಶೈರ್‌ನ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು.
ಗಿಲೆಸ್ಪಿ 71 ಟೆಸ್ಟ್ ಪಂದ್ಯಗಳಲ್ಲಿ 259 ವಿಕೆಟ್‌ಗಳು ಹಾಗೂ 97 ಏಕದಿನ ಪಂದ್ಯಗಳಲ್ಲಿ 142 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಆಸ್ಟೇಲಿಯ ಹಾಗೂ ಶ್ರೀಲಂಕಾ ನಡುವೆ ಟ್ವೆಂಟಿ-20 ಸರಣಿಯು ಫೆ.17ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಲಿದೆ. ಫೆ.19 ಹಾಗೂ 22 ರಂದು ಇನ್ನೆರಡು ಪಂದ್ಯಗಳು ನಡೆಯಲಿವೆ.





