ಬೆಳ್ತಂಗಡಿ : ವಿಶ್ವ ಮಾನವ ದಿನಾಚರಣೆ

ಬೆಳ್ತಂಗಡಿ , ಡಿ.29 : ನಾವು ಆದಿ ಮತ್ತು ಅಂತ್ಯದಲ್ಲಿ ವಿಶ್ವಮಾನವರಾಗಿ ಮಧ್ಯದಲ್ಲಿ ಸಂಕುಚಿತ ಮಾನವರಾಗಿ ಬದುಕುತ್ತಿದ್ದೇವೆ. ನಾವು ಸಂಕುಚಿತ ಭಾವನೆಯನ್ನು ತ್ಯಜಿಸಿ ನಮ್ಮ ಜೀವನ ಪೂರ್ತಿ ವಿಶ್ವ ಮಾನವರಾಗಿ ಬದುಕೋಣ ಎಂದು ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಮುರಳೀಧರ್ ಹೇಳಿದರು.
ಅವರು ಗುರುವಾರ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಬೆಳ್ತಂಗಡಿ ಇದರ ವತಿಯಿಂದ ವಿಶ್ವ ಮಾನವ ದಿನಾಚರಣೆಯಲ್ಲಿ ಮುಖ್ಯ ಭಾಷಣಗಾರರಾಗಿ ಆಗಮಿಸಿ ಮಾತನಾಡಿದರು.
ಜಾತಿ, ಮತ, ಧರ್ಮ, ಬಣ್ಣಗಳ ಭೇದವನ್ನು ಮರೆತು ಮಾನವ ಜಾತಿ ಒಂದೇ ಎಂಬುದನ್ನು ಅರಿತರೆ ವಿಶ್ವಮಾನವರಾಗಬಹುದು. ರಾಷ್ಟ್ರ ಕವಿ ಕುವೆಂಪು ಅವರು ಕವನ, ಕಾದಂಬರಿಯನ್ನು ಹೇಗೆ ರಚಿಸಿ ನಮಗೆ ಕೊಟ್ಟಿದ್ದಾರೋ ಅದೇ ರೀತಿ ನಿಜ ಬದುಕಿನಲ್ಲಿ ಅಳವಡಿಸಿಕೊಂಡು ವಿಶ್ವಮಾನವರಾಗಿದ್ದಾರೆ. ಸಮಾಜದಲ್ಲಿ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಾರೆ. ಮಹಿಳಾ ಧ್ವನಿಯಾಗಿ ಕಾವ್ಯದಲ್ಲಿ ಬಿಂಬಿಸಿದ್ದಾರೆ ಎಂದ ಅವರು, ರಾಷ್ಟ್ರೀಯವಾದವನ್ನು ಮಾಡದೆ ವಿಸ್ತಾರ ಮನೋಭಾವದಿಂದ ವಿಶ್ವವನ್ನು ಪ್ರೀತಿಸುವ ವಿಶ್ವಮಾನವರಾಗೋಣ. ಎಲ್ಲರೂ ಒಂದೇ ಭಾವನೆಯನ್ನು ಬೆಳೆಸಿಕೊಳ್ಳೋಣ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಅವರು, ಕುವೆಂಪು ಅವರು ಕರ್ನಾಟಕದ ಚೇತನ. ಅವರ ಕವನಗಳನ್ನು ಶಿಕ್ಷಣ ಇಲಾಖೆ ಪಠ್ಯ ಪುಸ್ತಕದಲ್ಲಿ ಅಳವಡಿಸಿಕೊಂಡು ಮಕ್ಕಳಿಗೆ ತಿಳಿಯಪಡಿಸುತ್ತಿದೆ. ನಾಡ ಗೀತೆ, ರೈತ ಗೀತೆಯಂತಹ ಕವನ, ಕಾದಂಬರಿಗಳನ್ನು ರಚಿಸಿ, ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ ರಾಷ್ಟ್ರ ಕವಿ ಕುವೆಂಪು ಅವರು ವಿಶ್ವ ಮಾನವರಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ದಿವ್ಯಜ್ಯೋತಿ ಅವರು, ನಾನು, ನನ್ನದು ಎಂಬ ಭಾವನೆಯನ್ನು ಕಿತ್ತು ಬಿಸಾಕಿ ಅದರಿಂದ ಹೊರಬಂದು ನಾವು, ನಮ್ಮವರು ಎಂಬ ಭಾವನೆಯನ್ನು ಬೆಳೆಸಿಕೊಂಡಾಗ ವಿಶ್ವಮಾನವತಾ ವಾದಕ್ಕೆ ಗೌರವವನ್ನು ಸಲ್ಲಿಸಿದಂತಾಗುತ್ತದೆ ಎಂದರು.
ತಾಪಂ ಉಪಾಧ್ಯಕ್ಷೆ ವೇದಾವತಿ, ಸದಸ್ಯ ಗೋಪಿನಾಥ್ ನಾಯಕ್, ನಿವೃತ್ತ ಸೇನಾನಿ ಎಂ. ಆರ್. ಜೈನ್, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ವಲಯ ಅರಣ್ಯಾಧಿಕಾರಿ ಉದಯ ನಾಯಕ್, ಉಪಸ್ಥಿತರಿದ್ದರು.
ಸವಣಾಲು ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸುಮಾ ಪಿ., ಮಂಜುಳಾ ಡಿ. ಪ್ರಸಾದ್, ತಾಲೂಕು ಕಚೇರಿ ಸಿಬಂದಿಗಳಾದ ಹರೀಶ್, ಸುಮನಾ, ಕವಿತಾ, ಉಷಾಕಿರಣ್ ಕುವೆಂಪು ಅವರ ಗೀತೆಗಳನ್ನು ಹಾಡಿದರು.
ಬೆಳ್ತಂಗಡಿ ತಹಶೀಲ್ದಾರ್ ತಿಪ್ಪೆ ಸ್ವಾಮಿ ಸ್ವಾಗತಿಸಿದರು.
ಪತ್ರಕರ್ತ ದೇವಿಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು , ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ. ಆರ್. ನರೇಂದ್ರ ವಂದಿಸಿದರು.







