ವೃದ್ಧ ಮಹಿಳೆಯ ಮೃತದೇಹ ಪತ್ತೆ : ಕೈಕಾಲು ಕಟ್ಟಿ ಕೊಲೆ ಶಂಕೆ
ಪುತ್ತೂರು , ಡಿ.29 : ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ವೃದ್ಧ ಮಹಿಳೆಯೊಬ್ಬರ ಮೃತದೇಹ ಮನೆಯೊಳಗೆ ಕೊಳೆತ ಸ್ಥಿತಿಯಲ್ಲಿ ಗುರುವಾರ ಸಂಜೆ ಪತ್ತೆಯಾಗಿದೆ. ಕೈಕಾಲು ಕಟ್ಟಿ ಕೊಲೆ ನಡೆಸಿದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ.
ಪುತ್ತೂರು ನಗರದ ಹಾರಾಡಿ ಸಮೀಪದ ಕಾರಡ್ಕ ಕೌಂಪೌಂಡ್ ನಿವಾಸಿ ಕೃಷ್ಣಯ್ಯ ಬಳ್ಳಾಲ್ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ವಿನೋದಿನಿ ಕಾಮತ್(70) ಮೃತಪಟ್ಟ ಮಹಿಳೆ.
ಮೂಲತಃ ಪುತ್ತೂರಿನ ಬನ್ನೂರು ನಿವಾಸಿಯಾಗಿದ್ದ ವಿನೋದಿನಿ ಕಾಮತ್ ಅವರು ತನ್ನ ಸ್ವಂತ ಮನೆಯನ್ನು ಮಾರಿ ಬೆಂಗಳೂರಿನಲ್ಲಿ ಪುತ್ರಿ ಮೈತ್ರಿ ಬಾಳಿಗೆ ಅವರ ಜೊತೆ ವಾಸಿಸುತ್ತಿದ್ದರು. ತೀವ್ರ ಉಬ್ಬಸ ಸಮಸ್ಯೆಯಿಂದಾಗಿ ಅಲ್ಲಿ ವಾಸಿಸಲು ಕಷ್ಟವಾಗಿ ಮತ್ತೆ ಪುತ್ತೂರಿಗೆ ಆಗಮಿಸಿ ಕಾರಡ್ಕ ಕೌಂಪೌಂಡ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು.
ಗುರುವಾರ ಮನೆಯ ಸುತ್ತ ವಾಸನೆ ಬಂದ ಕಾರಣ ಪಕ್ಕದ ಮನೆ ಮಂದಿ ವಿನೋದಿನಿ ಅವರ ಮನೆಯನ್ನು ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿತ್ತು.
ಮೃತ ವಿನೋದಿನಿ ಅವರ ಕೈಕಾಲುಗಳನ್ನು ಕಟ್ಟಿ ಹಾಕಲಾಗಿದ್ದು, ಮನೆಯ ಮುಂಬಾಗಿಲಿಗೆ ಹೊರಭಾಗದಿಂದ ಬೀಗ ಹಾಕಲಾಗಿತ್ತು. ಇದರಿಂದಾಗಿ ಪ್ರಕರಣ ಯಾರ ಗಮನಕ್ಕೂ ಬಂದಿರಲಿಲ್ಲ.
ವಿನೋದಿನಿ ಅವರು ಬೆಂಗಳೂರಿಗೆ ಪುತ್ರಿಯ ಮನೆಗೆ ತೆರಳಿರಬಹುದು ಎಂದು ನೆರೆ ಮನೆಯ ಮಂದಿ ತಿಳಿದುಕೊಂಡಿದ್ದರು. ಕೊಲೆ ನಡೆದ ಸ್ಥಳವನ್ನು ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸಿದ್ದು, ಮನೆಯೊಳಗಿದ್ದ ಕಪಾಟು ತೆರೆದ ಸ್ಥಿತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







