ಮೂಡಬಿದಿರೆ : ಯುವ ಲೇಕ್ ಸಮ್ಮೇಳನ-

ಮೂಡಬಿದಿರೆ , ಡಿ.29 : ನಮ್ಮ ಉಳಿವಿಗಾಗಿ ಪರಿಸರದ ಉಳಿವು ಅತ್ಯಂತ ಅವಶ್ಯ. ಪ್ರಸ್ತುತ ಇರುವ ಕೆರೆ-ಕೊಳ್ಳಗಳನ್ನು ಉಳಿಸಿಕೊಳ್ಳದೆ ಹೊಸ ಕೆರೆಗಳನ್ನು ಸೃಷ್ಟಿಸಿ ಕೆರೆ ಸಂರಕ್ಷಣೆ ಮಾಡುವ ಯೋಜನೆಗಳು ಅಪ್ರಸ್ತುತ. ಅನಾದಿಕಾಲದಿಂದಲೂ ಇರುವ ಕೆರೆಗಳಿರಲಿ ನೂತನವಾಗಿ ಸೃಷ್ಟಿಸಿದ ಕೆರೆಗಳಿರಲಿ ಎಲ್ಲದಕ್ಕೂ ಮಳೆ ನೀರೇ ಮೂಲ ಆಸರೆ. ಈಗಾಗಲೇ ಬತ್ತಿಹೋಗಿರುವ ಅಥವಾ ಹೂಳುತುಂಬಿರುವ ಕೆರೆಗಳಿಗೆ ಹೂಳೆತ್ತುವ ಮೂಲಕ ಮರುಜೀವ ನೀಡಿ, ಸುತ್ತಲೂ ಹಸಿರು ನಿರ್ಮಾಣ ಮಾಡಿದರೆ ನೀರಿನ ಸಮಸ್ಯೆ ತನ್ನಂತಾನೆ ನಿವಾರಣೆಯಾಗುತ್ತದೆ ಎಂದು ಮಂಗಳೂರು ಉತ್ತರದ ಶಾಸಕ ಜೆ.ಆರ್.ಲೋಬೋ ಅಭಿಪ್ರಾಯಪಟ್ಟರು.
ಆಳ್ವಾಸ್ ಕಾಲೇಜಿನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ದ್ವೈವಾರ್ಷಿಕ ಲೇಕ್- ಸಮ್ಮೇಳನ- 2016 ರ ಯುವ ಲೇಕ್ ಸಮ್ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಅವರು ಸಾರ್ವಜನಿಕರಿಗೆ ಎಲ್ಲರಿಗೂ ಪ್ರಶ್ನಿಸುವ ಅಧಿಕಾರ ಇದೆ. ಸಾರ್ವಜನಿಕರ ಹಣವನ್ನು ಸಂಬಳವಾಗಿ ಪಡೆಯುತ್ತಿರುವ ನಾನು ಎತ್ತಿನಹೊಳೆಯಂತಹ ಯೋಜನೆಯ ಸಮರ್ಪಕ ಮಾಹಿತಿಗಾಗಿ ಪ್ರಶ್ನಿಸುತ್ತೇನೆ ಎಂದರು.
ಕೃಷಿ ನೀರಾವರಿಗಾಗಿ ಹಳ್ಳ- ತೋಡುಗಳಿಗೆ ಕಟ್ಟ- ಒಡ್ಡುಗಳನ್ನು ಕಟ್ಟುವ ಪದ್ಧತಿ ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿತ್ತು. ಆದರೆ ಈಗ ಆಧುನಿಕ ತಂತ್ರಜ್ಞಾನದಿಂದಾಗಿ ಅತ್ಯಂತ ವೈಜ್ಞಾನಿಕವಾಗಿದ್ದ ನೀರು ಸಂರಕ್ಷಿಸುವ ಪದ್ಧತಿಯನ್ನು ಕೈಬಿಟ್ಟಿದ್ದೇವೆ. ಇದು ಪುನರ್ ಬಳಕೆಗೆ ತರುವುದು ಅನಿವಾರ್ಯ ಎಂದ ಅವರು ಮಂಗಳೂರಿನ ಪಿಲಿಕುಳ ನಿಸರ್ಗದಾಮದಲ್ಲಿ ಅಳಿವಿನಂಚಿನಲ್ಲಿದ್ದ ಕೆರೆಯೊಂದರ ಹೂಳೆತ್ತಿ ಅದರ ಸುತ್ತ ಗಿಡ ಮರಗಳನನು ನೆಟ್ಟು ತುಂಬಿ ತುಳುಕುವಂತೆ ಮಾಡಿದ ಯಶೋಗಾಥೆ ಇದೆ. ಪಿಲಿಕುಳ ನಿಸರ್ಗಧಾಮ ಮೂಲಪರಿಕಲ್ಪನೆಯೇ ಅಳಿವಿನಂಚಿನಲ್ಲಿರುವ ಪಶ್ಚಿಮಘಟ್ಟದ ಜೀವವೈವಿಧ್ಯವನ್ನು ಸಂರಕ್ಷಣೆಮಾಡುವುದು. ಈ ನಿಟ್ಟಿನಲ್ಲಿ ಪಶ್ಚಿಮಘಟ್ಟವನ್ನು ಪುನರ್‌ನಿರ್ಮಾಣಮಾಡುವ ಪ್ರಯತ್ನ ನಡೆಯುತ್ತಾ ಇದೆ. ಈ ಯೋಜನೆ ಫಲಪ್ರದವಾದರೆ ಇದು ರಾಜ್ಯದಲ್ಲಿ ಮಾತ್ರವಲ್ಲದೆ ದೇಶದಲ್ಲೇ ವಿನೂತನ ಯೋಜನೆಯಾಗಲಿದೆ ಎಂದರು.
ಪರಿಸರ ವಿಜ್ಞಾನಿ, ಅಂತಾರಾಷ್ಟ್ರೀಯ ದ್ವೈವಾರ್ಷಿಕ ಲೇಕ್- ಸಮ್ಮೇಳನ- 2016 ರ ಅಧ್ಯಕ್ಷ ಡಾ.ಟಿ.ವಿ.ರಾಮಚಂದ್ರ ಎತ್ತಿನಹೊಳೆ ನದಿತಿರುವ ಯೋಜನೆ ಅಸಂಬದ್ಧ ಹಾಗೂ ಅಸಮರ್ಪಕ ಯೋಜನೆ. ಅಲ್ಲಿ ಇರುವುದು 9.5 ಟಿಎಂಸಿ ಮಾತ್ರ. ಸರಕಾರಿ ಅಂಕಿ ಅಂಶದ ಪ್ರಕಾರ ಎತ್ತಿನಹೊಳೆಯಲ್ಲಿ 24 ಟಿಎಂಸಿ ನೀರಿದೆ ಅದಕ್ಕೆ ಯಾವ ವೈಜ್ಞಾನಿಕ ಅಧ್ಯಯನದ ವರದಿಯ ಆಧಾರ ಎಂಬುದು ತಿಳಿದಿಲ್ಲ. ಎತ್ತಿನಹೊಳೆಯಲ್ಲಿರುವ 9 ಟಿಎಂಸಿ ನೀರಿನಲ್ಲಿ 6 ಟಿಎಂಸಿ ನೀರು ಕೃಷಿಕಾರ್ಯಗಳಿಗೆ ಹಾಗೂ ಕುಡಿಯುವ ನೀರಿಗಾಗಿ ಬಳಕೆಯಾದರೆ 2 ಟಿಎಂಸಿ ನೀರು ಅವಶ್ಯ ಪ್ರೋಟೀನ್ ನೀಡುವ ಜಲಚರಗಳಿಗಾಗಿ ಬಳಕೆಯಾಗುತ್ತಿದೆ. ಇದರಲ್ಲಿ ಉಳಿಯುವುದು 0.85 ಟಿಎಂಸಿ ಮಾತ್ರ. ಹಾಗಿದ್ದರೆ ಎಲ್ಲಿದೆ 24 ಟಿಎಂಸಿ ನೀರು? ಎಂದು ಪ್ರಶ್ನಿಸಿದ ಅವರು ಅವೈಜ್ಞಾನಿಕವಾಗಿರುವ ಎತ್ತಿನಹೊಳೆಯಂತಹ ಅಸಂಬದ್ಧ ಯೋಜನೆಗಳನ್ನು ಕೈಬಿಡಿ. ಇಂತಹಾ ಅಸಂಬದ್ಧ ಯೋಜನೆಗೆ ಸಮರ್ಪಕ ಉತ್ತರ ಸಿಗುವವರೆಗೂ ಪ್ರಶ್ನಿಸುತ್ತಲೇ ಇರುತ್ತೇನೆ. ಉತ್ತರ ನೀಡದಿದ್ದರೆ ಬೀದಿಗಿಳಿದು ಹೋರಾಡಲೂ ಸಿದ್ಧ ಎಂದು ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ಪ್ರೊ.ಎಂ.ಡಿ ಸುಭಾಷ್‌ಚಂದ್ರನ್, ಎಂ.ಎ.ಖಾನ್, ಭರತ್ ಎಚ್ ಐತಾಳ್, ಡಾ.ಹರೀಶ್ ಭಟ್ ಹಾಗೂ ಶಾಸಕ ಜೆ.ಆರ್ ಲೋಬೋ ಅವರನ್ನು ಸನ್ಮಾಸಲಾಯಿತು.
ಮಾಚಿಸಚಿವ ಕೆ.ಅಮರನಾಥ ಶೆಟ್ಟಿ, ಕರ್ನಾಟಕ ಪರಿಸರ ಅಧ್ಯಯನ ಫೌಂಡೇಷನ್‌ನ ಪ್ರೊ.ರಾಜಶೇಖರ ಮೂರ್ತಿ, ಪ್ರೊ.ಬಿ.ಎಂ.ಕುಮಾರಸ್ವಾಮಿ, ಫಿನ್‌ಲ್ಯಾಂಡ್‌ನ ತಿಮೋ ಹುಟ್ಟುಲಾ, ಅಲ್ಫ್ರೆಡ್ ವ್ಯೆವೆಸ್ಟ್, ಅಸ್ಸಾಂ ವಿ.ವಿಯ ದೇವಸಿಸ್, ಉಮಾಮೋಹನ್, ಶ್ರೀವಿದ್ಯಾ ಉಪಸ್ಥಿತರಿದ್ದರು. ಆಳ್ವಾಸ್ ಪದವಿಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಸ್ವಾಗತಿಸಿ, ಪ್ರೊ.ದೀಪಾ ರತ್ನಾಕರ ಕಾರ್ಯಕ್ರಮ ನಿರೂಪಿಸಿದರು.







