ಮನುಜಮತ ವಿಶ್ವಪಥವಾಗಲಿ: ಡಾ.ಎಕ್ಕಾರು

ಉಡುಪಿ, ಡಿ.29: ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಆಶಯದಂತೆ ದೇಶ ಮನುಜಮತವಾಗಲಿ ವಿಶ್ವಪಥವಾಗಲಿ ಎಂದು ರಾಷ್ಟ್ರೀಯ ಸೇವಾ ಯೋಜನಾ ಕೋಶದ ರಾಜ್ಯ ಸಂಪರ್ಕ ಅಧಿಕಾರಿ ಡಾ.ಗಣನಾಥ ಎಕ್ಕಾರ್ ಹೇಳಿದ್ದಾರೆ.
ಗುರುವಾರ ಉಡುಪಿಯ ಸೈಂಟ್ ಸಿಸಿಲಿಸ್ ಪಪೂ ಕಾಲೇಜಿನಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಜಂಟಿ ಆಶ್ರಯದಲ್ಲಿ ನಡೆದ ರಾಷ್ಟ್ರಕವಿ ಕುವೆಂಪು ಅವರ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು. ಜಾಗತೀಕರಣದ ಈ ಪರಿಸ್ಥಿತಿಯಲ್ಲಿ ಕುವೆಂಪು ಅವರ ವಿಶ್ವ ಮಾನವ ತತ್ವ ಅತ್ಯಂತ ಪ್ರಸ್ತುತವಾಗಿದೆ. ಮನುಜಮತ ಇಂದು ಎಂದಿಗಿಂತಲೂ ಅಗತ್ಯವಾಗಿದೆ. ಪ್ರತಿ ಮಗುವೂ ಹುಟ್ಟಿನಿಂದಲೇ ವಿಶ್ವಮಾನವೆ. ನಾವು ಪ್ರತಿಯೊಬ್ಬರನ್ನೂ ಸೀಮಿತ ದೃಷ್ಟಿಕೋನದಿಂದ ನೋಡದೆ ವಿಸ್ತಾರವಾದ ದೃಷ್ಟಿಕೋನದಿಂದ ನೋಡುವುದೇ ವಿಶ್ವ ಮಾನವ ತತ್ವ. ವಿಶ್ವ ಮಾನವತೆಯಿಂದ ಎಲ್ಲರೂ ಒಂದು ಎನ್ನುವ ಭಾವನೆ ಬರಲಿದೆ. ಇದರಿಂದ ವಿಶ್ವ ಶಾಂತಿ ಸಾಧ್ಯವಾಗಲಿದ್ದು, ಎಲ್ಲೆಡೆ ಸಮಾನತೆ ಆವರಿಸಿ ಸರ್ವೋದಯ ಸಾಧ್ಯ ಎಂದು ಡಾ.ಎಕ್ಕಾರ್ ತಿಳಿಸಿದರು.
ವಿಶ್ವ ಮಾನವ ತತ್ವದ ಆಧಾರದಲ್ಲಿಯೇ ಕುವೆಂಪು ಅವರ ಎಲ್ಲ ಕೃತಿಗಳು ರಚನೆಯಾಗಿವೆ. ಅವರ ಕೃತಿಗಳಲ್ಲಿ ವೈಚಾರಿಕ ಹಾಗೂ ವೈಜ್ಞಾನಿಕ ದೃಷ್ಟಿಕೋನವನ್ನು ಕಾಣಬಹುದಾಗಿದೆ. ತಮ್ಮ ಶೂದ್ರ ತಪಸ್ವಿ ನಾಟಕದಲ್ಲಿ ಅಸ್ಪಶ್ಯತೆ ಆಚರಣೆಯನ್ನು ತೀವ್ರವಾಗಿ ವಿರೋಧಿಸಿದ್ದ ಕುವೆಂಪು, ರಾಷ್ಟ್ರಕವಿ ಮಾತ್ರವಲ್ಲದೆ ಜಗದ ಕವಿಯಾಗಿದ್ದರು ಎಂದರು.
ಉಡುಪಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕಾರ್ಯಕ್ರಮ ಉದ್ಘಾಟಿಸಿದರು.
ಇದೇ ಸಂದರ್ಭ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದ ‘ವಿಶ್ವಮಾನವ ಕುವೆಂಪು’ ಕಿರುಪುಸ್ತಕವನ್ನು ಜಿಲ್ಲಾಧಿಕಾರಿಗಳು ಬಿಡುಗಡೆಗೊಳಿಸಿದರು.
ವಿಶ್ವ ಮಾನವ ದಿನಾಚರಣೆ ಪ್ರಯುಕ್ತ ಪಪೂ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಅಧ್ಯಕ್ಷತೆ ವಹಿಸಿದ್ದರು.
ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜಗದೀಶ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಅಪರ ಜಿಲ್ಲಾಧಿಕಾರಿ ಅನುರಾಧ ಸ್ವಾಗತಿಸಿ, ತಹಶೀಲ್ದಾರ್ ಮಹೇಶ್ಚಂದ್ರ ವಂದಿಸಿದರು. ಎಸ್.ಜಿ.ಭಾಗವತ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಎಸ್. ಗಣೇಶ್ ಕುಮಾರ್ ಮತುತಿ ಬಳಗದಿಂದ ರಾಷ್ಟ್ರಕವಿ ಕುವೆಂಪು ಅವರ ಗೀತೆಗಳ ಗಾಯನ ನಡೆಯಿತು.







