ಪಾಕಿಸ್ತಾನ: ಸ್ವಾತ್ ಕೊಲೆಗಡುಕನಿಗೆ ಮರಣದಂಡನೆ ಶಿಕ್ಷೆ

ಇಸ್ಲಾಮಾಬಾದ್,ಡಿ.30:ಪಾಕಿಸ್ತಾನ ತಾಲಿಬಾನ್ ಹಿರಿಯ ನಾಯಕ ಮುಸ್ಲಿಂ ಖಾನ್‌ಗೆ ಪಾಕ್ ಸೇನಾ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಪಾಕ್ ತಾಲಿಬಾನ್ ಮಾಜಿ ವಕ್ತಾರ ಕೂಡಾ ಆಗಿರುವ ಈತ 31 ಮಂದಿ ಬಲಿಯಾಗಿ 69 ಮಂದಿಗಾಯಗೊಂಡಿದ್ದ ಪ್ರಕರಣವೊಂದರಲ್ಲಿ ಸೈನಿಕ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದ. ಈ ಘಟನೆಯಲ್ಲಿ ಸೈನಿಕರು ಹಾಗೂ ನಾಗರಿಕರು ಬಲಿಯಾಗಿದ್ದರು. ಹಣಕ್ಕಾಗಿ ಇಬ್ಬರು ಚೀನ ಇಂಜಿನಿಯರ್‌ಗಳು, ಇನ್ನೊಬ್ಬ ನಾಗರಿಕನನ್ನು ಅಪಹರಿಸಿದ ಕೇಸಿನಲ್ಲಿ ಸಹ ಖಾನ್ ಆರೋಪಿಯಾಗಿದ್ದು,ಪಾಕಿಸ್ತಾನದಲ್ಲಿ ಸ್ವಾತ್ ಕೊಲೆಗಡುಕ ಎಂದು ಕರೆಯಲ್ಪಡುತ್ತಿದ್ದಾನೆ. ಮ್ಯಾಜಿಸ್ಟ್ರೇಟ್ ಎದುರುಹಾಗೂ ವಿಚಾರಣಾ ಕೋರ್ಟಿನಲ್ಲಿ ಖಾನ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2009ರಲ್ಲಿ ಬಿಬಿಸಿ ಉರ್ದು ವರದಿಗಾರ ಅಬ್ದುಲ್ ಹೈ ಕಾಕರ್ ಈತನ ಸಂದರ್ಶನ ನಡೆಸಿದ್ದರು. ಉರ್ದು, ಇಂಗ್ಲಿಷ್, ಅರಬಿಕ್, ಪರ್ಶಿಯನ್ ಪಶ್ತೂನ್ ಭಾಷೆಗಳ ಜ್ಞಾನ ಖಾನ್ ಹೊಂದಿದ್ದಾನೆ. ಈತನನ್ನು ಪಾಕಿಸ್ತಾನಿ ಸೇನೆ 2009ರಲ್ಲಿ ಸೈನಿಕಕಾರ್ಯಾಚರಣೆ ನಡೆಸಿ ಸೆರೆಹಿಡಿದಿತ್ತು.
ಸೈನಿಕ ನ್ಯಾಯಾಲಯ ಮುಸ್ಲಿಂಖಾನ್ ಸಹಿತ ಇತರ ಎಂಟು ಮಂದಿ ಭಯೋತ್ಪಾದಕರಿಗೆ ಗಲ್ಲುಶಿಕ್ಷೆ ತೀರ್ಪು ನೀಡಿದೆ ಎಂದು ಪಾಕ್ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್‌ವ ದೃಢೀಕರಿಸಿದ್ದಾರೆ. 2015ರಲ್ಲಿ ಕರಾಚಿಯಲ್ಲಿ ಬಸ್ಸೊಂದರ ಮೇಲೆ ಭಯೋತ್ಪಾದನಾ ದಾಳಿ ಪ್ರಕರಣ ಹಾಗೂ ಸಾಮಾಜಿಕ ಕಾರ್ಯಕರ್ತ ಸಬಿನ್ ಮಹ್ಮೂದ್ ಕೊಲೆ ಪ್ರಕರಣದಲ್ಲಿ ಇತರ ನಾಲ್ವರು ಆರೋಪಿಗಳಿಗೆ ಸೈನಿಕ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
ಪಾಕಿಸ್ತಾನ ಸರಕಾರ, 2014ರಲ್ಲಿ ಪೇಶಾವರ ಸೈನಿಕ ಶಾಲೆಗೆ ನುಗ್ಗಿ ಭಯೋತ್ಪಾದಕರುನರಮೇಧ ನಡೆಸಿದ ಬಳಿಕ ವಿಶೇಷ ಸೈನಿಕ ಕೋರ್ಟು ಸ್ಥಾಪಿಸಿತ್ತು.
ಕೋರ್ಟಿನ ಕಾಲಾವಧಿ ಮುಂದಿನ ವಾರ ಕೊನೆಗೊಳ್ಳಲಿದೆ ಎಂದು ವರದಿ ತಿಳಿಸಿದೆ.







