ಬಿಜೆಪಿ ಐಟಿ ಸೆಲ್ ನಿಂದ ರಾಜಕಾರಣಿಗಳು, ಪತ್ರಕರ್ತರ ಹಿಟ್ ಲಿಸ್ಟ್ !
'ಐ ಯಾಮ್ ಎ ಟ್ರೋಲ್' ಪುಸ್ತಕದಲ್ಲಿ ಬಹಿರಂಗ

ಹೊಸದಿಲ್ಲಿ, ಡಿ.30: ಬಿಜೆಪಿ ಐಟಿ ಸೆಲ್ ರಾಜಕಾರಣಿಗಳು, ಪತ್ರಕರ್ತರ ಹಿಟಿ ಲಿಸ್ಟ್ ಇಟ್ಟುಕೊಂಡಿದೆಯೇ ? ಈ ಪಟ್ಟಿಯ ಆಧಾರದಲ್ಲಿ ಐಟಿ ಸೆಲ್ ವಿಪಕ್ಷ ರಾಜಕಾರಣಿಗಳ, ಮುಖ್ಯವಾಗಿ ಗಾಂಧಿ ಕುಟುಂಬ ಸದಸ್ಯರನ್ನು, ಪ್ರಮುಖ ಪತ್ರಕರ್ತರನ್ನು ಹಾಗೂ ಖಾನ್ ಗಳು ಸೇರಿದಂತೆ ಚಿತ್ರ ನಟರನ್ನು ವ್ಯವಸ್ಥಿತವಾಗಿ ಹಳಿಯುತ್ತಿದೆಯೇ ?
ಇಂತಹ ಒಂದು ಪ್ರಶ್ನೆಗೆ ಬಿಜೆಪಿ ಐಟಿ ಸೆಲ್ ನ ಮಾಜಿ ಕಾರ್ಯಕರ್ತೆ ಸಧವಿ ಖೋಸ್ಲಾ ಅವರ ಹೇಳಿಕೆಯೊಂದು ಉತ್ತರ ನೀಡುವ ಪ್ರಯತ್ನ ಮಾಡಿದೆ. ಖೋಸ್ಲಾ ಅವರ ಹೇಳಿಕೆ ಸ್ವಾತಿ ಚತುರ್ವೇದಿಯವರು ಬರೆದಿರುವ 'ಐ ಯಾಮ್ ಟ್ರೋಲ್' ಎಂಬ ಪುಸ್ತಕದಲ್ಲಿ ಉಲ್ಲೇಖಗೊಂಡಿದೆ. ಅದರಂತೆ ಖೋಸ್ಲಾ ಪ್ರಕಾರ ಬಿಜೆಪಿಯ ಐಟಿ ಸೆಲ್ ನಲ್ಲಿ ಕೆಲಸ ಮಾಡುವವರಿಗೆ ''ಸತತವಾಗಿ ಹಳಿಯಬೇಕಾಗಿರುವ ಪ್ರಮುಖ ಪತ್ರಕರ್ತರ ಹೆಸರುಗಳುಳ್ಳ ಹಿಟ್ ಲಿಸ್ಟ್ ಒಂದನ್ನು ನೀಡಲಾಗುತ್ತದೆ.'' ''ಇದರ ಅಂತಿಮ ಗುರಿ ಗಾಂಧಿ ಕುಟುಂಬದ ಮೇಲೆ ದಾಳಿ ನಡೆಸಿ ಹಳಿಯುವುದಾಗಿದೆ'' ಎಂದು ಖೋಸ್ಲಾ ಹೇಳಿಕೊಂಡಿದ್ದಾರೆ.
''ಮೋದಿ ಬಗ್ಗೆ ಎಲ್ಲಿಯಾದರೂ ಪ್ರತಿಕೂಲ ವರದಿ ಇದೆಯೆಂದಾದರೆ ಬಿಜೆಪಿ ಐಟಿ ಸೆಲ್ ನ ಸಾಧನಗಳ ಮೂಲಕ ಅವುಗಳನ್ನು ಗುರುತಿಸಿ ನಂತರ ಆ ವರದಿಗೆ ಕಾರಣರಾದವರ ವಿರುದ್ಧ ಟ್ರೋಲ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ದಾಳಿ ನಡೆಸಲಾರಂಭಿಸುತ್ತಾರೆ,'' ಎಂಬ ಖೋಸ್ಲಾ ಹೇಳಿಕೆ ಆ ಕೃತಿಯಲ್ಲಿ ಉಲ್ಲೇಖಗೊಂಡಿದೆ.
ಉತ್ತರ ಪ್ರದೇಶ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಬಿಜೆಪಿಯ ಸಾಮಾಜಿಕ ಜಾಲತಾಣ ಸೆಲ್ ಇನ್ನಷ್ಟು ವಿಸ್ತರಿಸುತ್ತಿದೆ'' ಎಂದು ಖೋಸ್ಲಾ ಹೇಳಿರುವುದೂ ಈ ಪುಸ್ತಕದಲ್ಲಿ ಅಚ್ಚಾಗಿದೆ.
2014 ಚುನಾವಣೆಯ ಸಂದರ್ಭ ಬಿಜೆಪಿಯ ನ್ಯಾಷನಲ್ ಡಿಜಿಟಲ್ ಆಪರೇಶನ್ಸ್ ಸೆಂಟರ್ (ಎನ್ ಡಿ ಒ ಸಿ) ಇದರ ಮುಖ್ಯಸ್ಥರಾಗಿದ್ದ ಅರವಿಂದ್ ಗುಪ್ತಾ ಅವರು ಈ ಆರೋಪಗಳನ್ನು ನಿರಾಕರಿಸಿದ್ದಾರೆ. ''ಖೋಸ್ಲಾ ನಮ್ಮಲ್ಲಿ ಕೆಲಸ ಮಾಡಿರಲೇ ಇಲ್ಲ. ಆಕೆಯನ್ನು ವಿವಾಹ ಸಮಾರಂಭವೊಂದರಲ್ಲಿ ಭೇಟಿಯಾಗಿದ್ದೆ. ಒಂದು ಯೋಜನೆಗಾಗಿ ಆಕೆಯನ್ನು ಆಯ್ಕೆ ಮಾಡಲಾಗಿತ್ತಾದರೂ ಆಕೆಗೆ ಅದು ದೊರಕಿರಲಿಲ್ಲ,'' ಎಂದು ಗುಪ್ತಾ ಹೇಳಿದ್ದಾರೆ.
ಕೃತಿಯಲ್ಲಿ ಖೋಸ್ಲಾ ಅವರು 2014ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿರಣ್ ಖೇರ್ ಜತೆ ನಿಂತು ತೆಗೆಸಿಕೊಂಡಿರುವ ಚಿತ್ರವಿದ್ದರೆ, ಗುಪ್ತಾ ಬಳಿ ಆಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜತೆ ಇತರ ಹಲವರೊಂದಿಗೆ ನಿಂತಿರುವ ಫೋಟೋ ಇದ್ದು ಅವರ ಪ್ರಕಾರ ಆಕೆ ಪಂಜಾಬ್ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ.







