ಮಸೀದಿಗೆ ಹಂದಿ ಮಾಂಸ ಎಸೆದಾತ ಜೈಲಿನಲ್ಲಿ ನಿಧನ

ಬ್ರಿಸ್ಟಲ್,ಡಿ.30 : ಮಸೀದಿಯೊಂದರ ಬಾಗಿಲಿಗೆ ಹಂದಿ ಮಾಂಸ ಸಿಕ್ಕಿಸಿದ ಅಪರಾಧಕ್ಕೆ ಜೈಲು ಶಿಕ್ಷೆಗೊಳಗಾಗಿದ್ದ 35 ವರ್ಷದ ಕೆವಿನ್ ಕ್ರೇಹನ್ ಎಂಬ ವ್ಯಕ್ತಿ ಜೈಲಿನಲ್ಲಿಯೇ ನಿಧನ ಹೊಂದಿದ್ದಾನೆ. ಆತ ಮಾಡಿದ ತಪ್ಪಿಗೆ ಆತನಿಗೆ 12 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿತ್ತು.
ಆತನ ಸಾವಿನ ಬಗ್ಗೆ ತನಿಖೆ ನಡೆಯುತ್ತಿದ್ದು ಬೇರೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ನೋಲೆ ಎಂಬ ಪಟ್ಟಣದ ವಾಸಿಯಾಗಿದ್ದ ಕ್ರೆಹಾನ್ 48 ವರ್ಷದ ಮಾರ್ಕ್ ಬೆನ್ನೆಟ್ ಎಂಬಾತನೊಂದಿಗೆ ಸೇರಿ ಬ್ರಿಸ್ಟಲ್ ನಗರದ ಟೊಟ್ಟರ್ ಡೌನ್ ನ ಗ್ರೀನ್ ಸ್ಟ್ರೀಟ್ ಪ್ರದೇಶದಲ್ಲಿರುವ ಜಾಮಿಯಾ ಮಸೀದಿಗೆ ಹಂದಿ ಮಾಂಸ ಎಸೆದಿರುವುದಾಗಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ನಾಲ್ಕು ಮಂದಿ ಆರೋಪಿಗಳನ್ನು ಜುಲೈ ತಿಂಗಳಲ್ಲಿ ಬಂಧಿಸಲಾಗಿತ್ತು. ಮಸೀದಿಗೆ ಹಂದಿ ಮಾಂಸ ಎಸೆದ ಸಂದರ್ಭ ಅವರಿಬ್ಬರೂ ಅದರ ಸುತ್ತಲೂ ಇರುವ ಬೇಲಿಗೆ ಸೈಂಟ್ ಜಾರ್ಜ್ ಧ್ವಜವನ್ನೂ ಕಟ್ಟಿದ್ದರು. ಬೆನ್ನೆಟ್ ಗೆ ಈ ಸಂಬಂಧ ಒಂಬತ್ತು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದ್ದರೆ ಆತನ ಪತ್ನಿ ಅಲಿಸನ್ ಬೆನ್ನೆಟ್ ಕೂಡ ಈ ಘಟನೆಯಲ್ಲಿ ಶಾಮೀಲಾಗಿದ್ದು ಆಕೆಗೆ ಆರು ತಿಂಗಳು ಜೈಲುವಾಸ ವಿಧಿಸಲಾಗಿತ್ತು. ಇವರ ಹೊರತಾಗಿ 31 ವರ್ಷದ ಏಂಜಲಾ ಸ್ವೇಲ್ಸ್ ಎಂಬಾಕೆಗೂ ನಾಲ್ಕು ತಿಂಗಳು ಶಿಕ್ಷೆ ವಿಧಿಸಲಾಗಿತ್ತು.
ನಾಲ್ಕು ಮಂದಿಯೂ ಮಸೀದಿಯ ಸದಸ್ಯರೊಬ್ಬರಿಗೆ ಜನಾಂಗೀಯ ನಿಂದನೆ ಮಾಡಿದ್ದರೆಂದು ಆರೋಪಿಸಲಾಗಿತ್ತು. ನಾಲ್ಕು ಮಂದಿಗೂ ಇಂಗ್ಲೆಂಡ್ ಹಾಗೂ ವೇಲ್ಸ್ ನಗರದ ಯಾವುದೇ ಮಸೀದಿಯ 100 ಮೀಟರ್ ಸುತ್ತಮುತ್ತ ಮುಂದಿನ 10 ವರ್ಷಗಳ ಕಾಲ ಸುಳಿಯದಂತೆ ತಡೆ ವಿಧಿಸಲಾಗಿತ್ತು.





