ವೈರಲ್ ಆಯಿತು ಆಸಿಸ್ ಶ್ರೇಷ್ಠ ನಾಯಕನ ಪುತ್ರನ ವಿಶೇಷ ಸಿಕ್ಸ್
ಯಾರು ಗೊತ್ತೇ ಈ ಜೂನಿಯರ್ ಚಾಂಪಿಯನ್ ?

ಹೊಸದಿಲ್ಲಿ, ಡಿ.30: ಸ್ಟೀವ್ ವಾ ಆಸ್ಟ್ರೇಲಿಯಾ ಕಂಡ ಶ್ರೇಷ್ಠ ಕ್ರಿಕೆಟ್ ನಾಯಕನೆಂಬುದಕ್ಕೆ ಎರಡು ಮಾತಿಲ್ಲ. ಈಗ ಅವರ ಹದಿಹರೆಯದ ಪುತ್ರಆಸ್ಟಿನ್ ವಾ ತಾನು ತಂದೆಗೆ ತಕ್ಕ ಮಗನೆಂಬುದನ್ನು ಸಾಬೀತು ಪಡಿಸಿದ್ದಾರೆ.
17 ವರ್ಷದ ಆಸ್ಟಿನ್ ಸಿಡ್ನಿಯಲ್ಲಿ ಬಿಬಿಎಲ್ ಕರ್ಟನ್ ರೈಸರ್ ಅಂಗವಾಗಿ ಗಿಲ್ ಕ್ರೈಸ್ಟ್ ಇಲೆವೆನ್ ತಂಡದ ವಿರುದ್ಧ ಪಾಂಟಿಂಗ್ ಇಲೆವೆನ್ ತಂಡದ ಪರವಾಗಿ ಆಡುತ್ತಿದ್ದಾಗ 16ನೇ ಓವರ್ ನಲ್ಲಿ ಬ್ರಾಡ್ಲಿ ಹೋಪ್ ಅವರು ಬೌಲಿಂಗ್ ಮಾಡುತ್ತಿದ್ದ ಸಂದರ್ಭ ಶಾರ್ಟ್ ಬಾಲ್ ಅನ್ನು ಎತ್ತಿ ಲಾಂಗ್ ಆಫ್ ಫೆನ್ಸ್ ಅತ್ತ ಸಿಕ್ಸರ್ ಬಾರಿಸಿದ ರೀತಿ ಅದ್ಭುತವಾಗಿತ್ತು. ಟೆನಿಸ್ ಸರ್ವ್ ಶೈಲಿಯಲ್ಲಿ ಅವರು ಈ ಬಾಲನ್ನು ಸಿಕ್ಸರಿಗಟ್ಟಿದ್ದರು. ಈ ಆಟದ ವೀಡಿಯೊ ಇದೀಗ ವೈರಲ್ ಆಗಿ ಬಿಟ್ಟು ಆಸ್ಟಿನ್ ಅವರಿಗೆ ಭಾರೀ ಜನಪ್ರಿಯತೆ ತಂದಿತ್ತಿದೆ. ಈ ಪಂದ್ಯದಲ್ಲಿ ಅವರು 28 ಬಾಲ್ ಗಳಲ್ಲಿ 27 ರನ್ ಬಾರಿಸಿ ತಮ್ಮ ತಂಡಕ್ಕೆ ವಿಜಯ ದೊರಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ವಿಜಯಕ್ಕಾಗಿ ಮೂರು ಬಾಲ್ ಗಳಲ್ಲಿ ತಂಡಕ್ಕೆ ಎಂಟು ರನ್ ಬೇಕಿದ್ದಾಗ ಆಸ್ಟಿನ್ ಔಟಾಗಿದ್ದರು. ಅಂತಿಮವಾಗಿ ವಿಲ್ ಸದರ್ಲೆಂಡ್ ಎರಡು ಬೌಂಡರಿ ಬಾರಿಸಿ ತಂಡಕ್ಕೆ ವಿಜಯ ತಂದಿತ್ತಿದ್ದರು. ಈ ಪಂದ್ಯದಲ್ಲಿ ಗಿಲ್ ಕ್ರಿಸ್ಟ್ ತಂಡ ಮೂರು ವಿಕೆಟ್ ನಷ್ಟಕ್ಕೆ 165 ರನ್ ಬಾರಿಸಿತ್ತು.
ಅಕ್ಟೋಬರ್ ತಿಂಗಳಲ್ಲಿ ನಡೆದ ಅಂಡರ್-17 ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿ ಅವರು ಎನ್ ಎಸ್ ಡಬ್ಲ್ಯು ಮೆಟ್ರೋ ತಂಡದ ಅಂತಿಮ ಪಂದ್ಯದಲ್ಲಿ ಟಾಪ್ ಸ್ಕೋರರ್ ಆಗಿ 136 ಬಾಲ್ ಗಳಿಗೆ 122 ರನ್ ಗಳಿಸಿದ್ದರು. ಈ ಪಂದ್ಯಾವಳಿಯಲ್ಲಿ ಅವರು ಒಟ್ಟು 372 ರನ್ ಪೇರಿಸಿ ಸರಾಸರಿ 74.4 ರನ್ ದಾಖಲಿಸಿ ಎಲ್ಲರ ಗಮನ ಸೆಳೆದಿದ್ದರು.
ಡಿಸೆಂಬರ್ ತಿಂಗಳಲ್ಲಿ ನಡೆದ ಅಂಡರ್-19 ಚಾಂಪಿಯನ್ ಶಿಪ್ ನಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಇಲೆವೆನ್ ಪರವಾಗಿ ಆಡಿದ್ದ ಆಸ್ಟಿನ್ ತನ್ನ ಪ್ರಥಮ ಪಂದ್ಯದಲ್ಲಿ 53 ರನ್ ಬಾರಿಸಿದ್ದರು.







