ಹೆಲಿಕಾಪ್ಟರ್ ಹಗರಣ:ತ್ಯಾಗಿಗೆ ಹೈಕೋರ್ಟ್ ನೋಟಿಸ್

ಹೊಸದಿಲ್ಲಿ,ಡಿ.30: ಆಗಸ್ಟಾ ವೆಸ್ಟಲ್ಯಾಂಡ್ ಹೆಲಿಕಾಪ್ಟರ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿರುವ ಮೇಲ್ಮನವಿಗೆ ಉತ್ತರಿಸುವಂತೆ ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್.ಪಿ.ತ್ಯಾಗಿ ಅವರಿಗೆ ದಿಲ್ಲಿ ಉಚ್ಚ ನ್ಯಾಯಾಲಯವು ಇಂದು ನೋಟಿಸನ್ನು ಹೊರಡಿಸಿದೆ. ಹಗರಣದಲ್ಲಿ ಇತರ ಇಬ್ಬರೊಂದಿಗೆ ಬಂಧಿಸಲ್ಪಟ್ಟಿದ್ದ ತ್ಯಾಗಿ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದಾರೆ. ಅವರು ಜಾಮೀನಿನ ಮೇಲೆ ಹೊರಗಿದ್ದರೆ ತನ್ನ ತನಿಖೆಗೆ ಅಡಚಣೆಯಾಗುತ್ತದೆ ಎಂದು ಸಿಬಿಐ ಮೇಲ್ಮನವಿಯಲ್ಲಿ ಪ್ರತಿಪಾದಿಸಿದೆ.
ತ್ಯಾಗಿಯವರಿಗೆ ನೋಟಿಸ್ ಹೊರಡಿಸಿದ ನ್ಯಾ.ವಿಪಿನ್ ಸಾಂಘಿ ಅವರು ವಿಚಾರಣೆಯನ್ನು ಜ.3ಕ್ಕೆ ನಿಗದಿಗೊಳಿಸಿದರು. ಇತರ ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಗಳನ್ನು ವಿಚಾರಣಾ ನ್ಯಾಯಾಲಯವು ಜ.4ರಂದು ವಿಚಾರಣೆಗಾಗಿ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ ಎಂದು ಸಿಬಿಐ ತಿಳಿಸಿದೆ.
ಡಿ.9ರಂದು ಸಿಬಿಐನಿಂದ ಬಂಧನಕ್ಕೊಳಗಾಗಿದ್ದ ತ್ಯಾಗಿಯವರನ್ನು ವಿಶೇಷ ನ್ಯಾಯಾಲ ಯವು ಡಿ.26ರಂದು ಜಾಮೀನಿನಲ್ಲಿ ಬಿಡುಗಡೆಗೊಳಿಸಿತ್ತು.
Next Story





