ಕಾಡಾನೆ ದಾಳಿ ಪ್ರಕರಣ : ಆಹೋರಾತ್ರಿ ಪ್ರತಿಭಟನೆಯಿಂದ ಎಚ್ಚೆತ್ತುಕೊಂಡ ತೋಟದ ಮಾಲಕ

ಸಿದ್ದಾಪುರ, ಡಿ.30: ಸಮೀಪದ ವಡ್ಡರಳ್ಳಿ ಕಾಫಿ ತೋಟದಲ್ಲಿ ಗುರುವಾರ ಕಾಡಾನೆ ದಾಳಿಗೆ ಬಲಿಯಾದ ಮೈಲಾತ್‌ಪುರ ಗ್ರಾಮದ ನಿವಾಸಿ ಕಾರ್ಮಿಕ ಚೆಲುವ ಎಂಬವರ ಮೃತದೇಹವನ್ನು ತೋಟದ ಮಾಲಕನ ಮನೆಯ ಮುಂದೆ ಇಟ್ಟು ಕಾರ್ಮಿಕರು ಮತ್ತು ಗ್ರಾಮ ನಿವಾಸಿಗಳು ಆಹೋರಾತ್ರಿ ಪ್ರತಿಭಟನೆ ನಡೆಸಿದೆ.
ಪ್ರತಿಭಟನೆ ಮುಂದುವರೆಯುತ್ತಿದ್ದಂತೆ ಶುಕ್ರವಾರ ಬೆಳಿಗ್ಗೆ ತಮಿಳುನಾಡಿನಲ್ಲಿರುವ ತೋಟದ ಮಾಲಕ ಪ್ರತಿಭಟನೆಯ ತೀವ್ರತೆಯನ್ನು ಅರಿತು ಮ್ಯಾನೇಜರ್ ಮೂಲಕ ಮೃತ ಕಾರ್ಮಿಕನ ಕುಟುಂಬಕ್ಕೆ 2 ಲಕ್ಷ ರೂ ಗಳ ಚೆಕ್ಕನ್ನು ಹಸ್ತಾಂತರಿಸಿದ್ದಾರೆ.
ಅರಣ್ಯ ಇಲಾಖೆ ವತಿಯಿಂದ ಕೂಡ 2 ಲಕ್ಷ ರೂ ಗಳ ಚೆಕ್ಕನ್ನು ನೀಡಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಉಳಿದ 3 ಲಕ್ಷ ರೂ.ಗಳನ್ನು ನೀಡುವುದಾಗಿ ಹಾಗೂ ತೋಟದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಓಡಿಸುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ ಹಿನ್ನಲೆ ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ.
ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಿದರು.
ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.





