ಸಾಹಿತ್ಯ ಸುಡುವ ಬೆಂಕಿಯಾಗಬಾರದು, ಬೆಳಗುವ ದೀಪವಾಗಬೇಕು-ಸಮ್ಮೇಳನಾಧ್ಯಕ್ಷ ಹರಿನಾರಾಯಣ ಮಾಡಾವು
ಪುತ್ತೂರು ತಾಲೂಕು 16ನೆಯ ಕನ್ನಡ ಸಾಹಿತ್ಯ ಸಮ್ಮೇಳನ

ಪುತ್ತೂರು, ಡಿ.30 : ಸಾಹಿತ್ಯ ಜೀವನದ ಎಲ್ಲಾ ಕ್ಷೇತ್ರದಲ್ಲಿಯೂ ಹಾಸು ಹೊಕ್ಕಾಗಿದ್ದು, ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಬೇಕು. ಸಾಹಿತ್ಯ ಎಂಬುದು ಬೆಳಗುವ ದೀಪವಾಗಬೇಕು ವಿನಃ ಅದು ಎಂದೂ ಸುಡುವ ಬೆಂಕಿಯಾಗಬಾರದು ಎಂದು ಪ್ರೊ.ಹರಿನಾರಾಯಣ ಮಾಡಾವು ಹೇಳಿದರು.
ಪೆರ್ಲಂಪಾಡಿ ಷಣ್ಮುಖದೇವ ಪ್ರೌಢ ಶಾಲೆಯಮೊಗಪ್ಪೆ ಎನ್ ಈಶ್ವರಭಟ್ ವೇದಿಕೆಯಲ್ಲಿ ಶುಕ್ರವಾರ ನಡೆದ ಪುತ್ತೂರು ತಾಲೂಕು 16 ನೇ ಸಾಹಿತ್ಯ ಸಮ್ಮೇಳದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದರು.
ಸಾಹಿತ್ಯ ಜನರ ಜೀವನಾಡಿಯಾಗಬೇಕು. ಸಾಹಿತ್ಯ ನಿರ್ಮಿತಿಯಲ್ಲಿ , ಸಾಹಿತ್ಯ ಪ್ರೀತಿಯಲ್ಲಿ ಹೆಣ್ಣು , ಗಂಡು ಎಂಬ ಭೇದವಿಲ್ಲ. ಜನಪದ ಸಾಹಿತ್ಯದಲ್ಲೂ ಮಹಿಳಾ ಪ್ರಧಾನ್ಯತೆಯನ್ನು ಕಾಣಲು ಸಾಧ್ಯವಾಗುತ್ತದೆ. ಜನಪದ ಕುಟುಂಬ ಕೇಂದ್ರಿತವಾಗಿರುವುದೇ ಇದಕ್ಕೆ ಕಾರಣವಾಗಿದೆ. ಬದುಕಿನ ನೋವು ನಲಿವುಗಳು ಪರಿಪಾಕಗೊಂಡು ಜೀವನಾನುಭವ ಪಕ್ವವಾಗಿ ಹದಕ್ಕೆ ಬಂದಾಗ ಸಾಹಿತ್ಯ ನಿರ್ಮಾಣ ಸಹಜವಾಗುತ್ತದೆ. ಈ ರೀತಿಯ ಸಾಹಿತ್ಯ ಸಕಾಲಿಕವೂ , ಸಾರ್ವಕಾಲಿಕವೂ ಆಗಿ ಮೌಲ್ಯಯುತ ಮೇಲ್ಮೆಯನ್ನು ಹೊಂದಿರುತ್ತದೆ ಎಂದರು.
ಯಕ್ಷಗಾನದಲ್ಲಿ ಕಲೆ ಸಾಹಿತ್ಯ, ಸಂಸ್ಕೃತಿಗೆ ಸಂಪೂರ್ಣವಾದ ಬೆಂಬಲವಿದೆ. ತಾಳಮದ್ದಲೆಯಲ್ಲೂ ಸ್ವಾರಸ್ಯಕರವಾದ ಸಾಹಿತ್ಯ ಲೋಕದ ನಿರ್ಮಾಣ ಸಾಧ್ಯವಾಗಿದೆ ಎಂದು ನುಡಿದರು.
ಹಣ ಗಳಿಸುವ ಆಸಕ್ತಿಯಿಂದ ಇಂದು ಗುಣ ಬೆಳೆಸುವ ಪೃವೃತ್ತಿ ಮರೆಯಾಗುತ್ತಿದೆ. ನಾವು ಏನು ಮಾಡಿದರೂ ಅದು ನಡೆಯುತ್ತದೆ ಮತ್ತು ಅದು ಸರಿ ಎಂಬ ಭಾವ ಜನರಲ್ಲಿ ಮೂಡುತ್ತಿದೆ. ಇದು ಸರಿಯಾದ ವ್ಯವಸ್ಥೆಯಲ್ಲ. ಭಾಷಾ ಶುದ್ಧತೆಯಾಗಲಿ, ಸಾಹಿತ್ಯ ಸೌಂದರ್ಯವನ್ನಾಗಲಿ , ಜೀವನ ಮೌಲ್ಯಗಳನ್ನು ಗಮನಿಸುವ ವ್ಯವಧಾನ ಕಾಣಿಸುತ್ತಿಲ್ಲ. ಬದುಕಿನ ಧಾವಂತಗಳ ನಡುವೆ ನಾವು ಮನುಷಯತ್ವವನ್ನೇ ಕೇಳದುಕೊಳ್ಳುತ್ತಿದ್ದೇವೆ. ಹಣಕ್ಕಿಂತ ಮನುಷ್ಯನಿಗೆ ಗುಣ ಮುಖ್ಯವಾಗಬೇಕು. ಆಧುನಿಕ ಮಕ್ಕಳು ದಾರಿತಪ್ಪುತ್ತಿದ್ದರೆ ಅದಕ್ಕೆ ಪೋಷಕರೇ ಹೊಣೆಗಾರರಾಗುತ್ತಾರೆ ಎಂದು ಹೇಳಿದರು.
ಆದಿ ಕವಿ ಪಂಪ ಮತ್ತು ಆತನಿಗಿಂತ ಮೊದಲು ಇಲ್ಲಿ ಮಹಾ ಕವಿಗಳು ಕನ್ನಡದ ಕವಿಗಳಾಗಿ ಹೋಗಿದ್ದಾರೆ. ಅವರ ನಂತರ ಬಂದ ಕವಿಗಳು ಕನ್ನಡದ ಕಣಜವನ್ನು ತುಂಬಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನ ಎಂಬ ಶೀರ್ಷಿಕೆಯಲ್ಲಿ ಮೂರು ಪದಗಳು ಒಗ್ಗೂಡಿದೆ. ಮೂರು ಪದಗಳನ್ನು ಒಗ್ಗೂಡಿಸಿದಾಗ ಮಾತ್ರ ಸಮ್ಮೇಳನದ ಸಡಗರ ಸಾಮೂಹಿಕ ನುಡಿ ಹಬ್ಬವಾಗಿ ಅದಕ್ಕೆ ಜಾತ್ರೆಯ ಮೆರುಗನ್ನು ನೀಡುತ್ತದೆ. ಸಾಮಾಜಿಕ ಸ್ವಾಸ್ಥ್ಯಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನಗಳು ಅವಶ್ಯವಾದುದು ಎಂದು ಹೇಳಿದರು.
ಕನ್ನಡ ಅನ್ನ ಕೊಡುವ, ಜ್ಞಾನ ಕೊಡುವ ಭಾಷೆಯಾಗಿಲ್ಲ: ಸುಬ್ರಾಯ ಚೊಕ್ಕಾಡಿ
ಸಮ್ಮೇಳನವನ್ನು ಉದ್ಘಾಟಿಸಿದ ಕವಿ ಸುಬ್ರಾಯ ಚೊಕ್ಕಾಡಿ ಮಾತನಾಡಿ, ಕನ್ನಡ ಭಾಷೆ ಅನ್ನ ಕೊಡುವ ಜ್ಞಾನ ಕೊಡುವ ಭಾಷೆಯಾಗಿ ಬೆಳೆದಿಲ್ಲ, ಕನ್ನಡವನ್ನು ಬೆಳೆಸುವಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ. ಈ ಕಾರಣಕ್ಕೆ ಕನ್ನಡ ಇಂದು ಕೇವಲ ಆಡು ಭಾಷೆಯಾಗಿ ಉಳಿದಿದೆ ಎಂದು ಹೇಳಿದರು.
ಅನ್ನ ಕೊಡುವ ಭಾಷೆಯಾಗಿ ಇಂಗ್ಲೀಷ್ ಬೆಳೆದಿರುವ ಕಾರಣ ಜನರು ಹೆಚ್ಚು ಆಂಗ್ಲ ಭಾಷೆಯ ಕಡೆಗೆ ವ್ಯಾಮೋಹಗೊಂಡಿದ್ದಾರೆ. ಕನ್ನಡದ ಈ ದುಸ್ಥಿತಿಗೆ ನಾವು ಮತ್ತು ನಮ್ಮನ್ನಾಳುವವರೇ ಕಾರಣವಾಗುತ್ತಾರೆ. ಆಂಗ್ಲ ಭಾಷೆಯನ್ನು ಕಲಿಯುವುದು ತಪ್ಪು ಎಂದು ನಾವು ಹೇಳುವುದು ಸರಿಯಲ್ಲ. ಯಾವ ಮಾಧ್ಯಮಕ್ಕೆ ಒತ್ತು ನೀಡಬೇಕು ಎಂದು ನಮ್ಮೊಳಗೇ ಗೊಂದಲಗಳು ಇವೆ . ಆಂಗ್ಲ ಭಾಷೆ ಬಲ್ಲವರು ಮಾತ್ರ ಬದುಕುತ್ತಾರೆ ಎಂಬ ತಪ್ಪು ಭಾವನೆ ಜನರ ಮನಸ್ಸಿನಲ್ಲಿ ಬೇರೂರಿದೆ. ನಾವು ಮಾತೃಭಾಷೆಯಾಗಿ ಕನ್ನಡವನ್ನೇ ಬಳಸುವಂತಾಗಬೇಕು. ಕರ್ನಾಟಕದಲ್ಲಿ ಕನ್ನಡವೇ ಮಾತೃಭಾಷೆಯಾಗಬೇಕು . ಕನ್ನಡ ಭಾಷೆಯ ಗೌರವ ಪೋಷಕರಿಗೆ ತಲುಪಿಲ್ಲ ಈ ಕಾರಣಕ್ಕೆ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಉಳಿದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕನ್ನಡಿಗರಾದ ನಾವೇ ಕನ್ನಡವನ್ನು ಮೂಲೆಗುಂಪು ಮಾಡುತ್ತಿದ್ದೇವೆ.ನಮಗೆ ಭಾಷೆಯ ಕುರಿತು ಖಚಿತ ನಿಲುವು ಇಲ್ಲದೇ ಇರುವುದೇ ಇದಕ್ಕೆಲ್ಲಾ ಕಾರಣವಾಗಿದೆ.
ಕನ್ನಡದ ಕಂಪು ಎಲ್ಲೆಡೆ ಪಸರಿಸಬೇಕಾದರೆ ಕನ್ನಡಿಗರೇ ಹೋರಾಟವನ್ನು ನಡೆಸಬೇಕು, ರಾಜ್ಯದಲ್ಲಿ ಕನ್ನಡ ಉಳಿವಿಗಾಗಿ ನೂರಾರು ಸಂಘಟನೆಗಳು ಕೆಲಸ ಮಾಡುತ್ತಿದ್ದರೂ ಕನ್ನಡಕ್ಕೆ ಸರಿಯಾದ ಮಾನ್ಯತೆ ಸಿಗದೇ ಇರುವುದು ಇಚ್ಚಾಶಕ್ತಿಯ ಕೊರತೆಯಿಂದಾಗಿದೆ. ಮಕ್ಕಳಿಗೆ ಪ್ರಾದೇಶಿಕ ಭಾಷೆಯಲ್ಲೇ ಶಿಕ್ಷಣವನ್ನು ನೀಡುವ ಪೃವೃತ್ತಿಯನ್ನು ಬೆಳೆಸಿಕೊಳ್ಳಬೇಕು. ನಾವು ಕನ್ನಡವನ್ನು ಪ್ರೀತಿಸುವ ಮನಸ್ಸು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಮ್ಮೇಳನದಲ್ಲಿ ಪ್ರಶಸ್ತಿ ವಿಜೇತ ಶಿಕ್ಷಕರಾದ ವಸಂತಿ.ಕೆ, ಆನಂದ ಪಿ, ನಯನಾ ವಿ. ರೈ, ಮೋನಪ್ಪ ಎಂ, ಹಾಗೂ ಕುಸ್ತಿಪಟು ಅಂಕಿತಾ ಅವರನ್ನು ಸನ್ಮಾನಿಸಲಾಯಿತು.
ಸ್ಥಳೀಯ ಸಾಹಿತಿಗಳು ಬರೆದ ಪುಸ್ತಕವನ್ನು ಸಮ್ಮೇಳನಾಧ್ಯಕ್ಷರು ಬಿಡುಗಡೆ ಮಾಡಿದರು.
ಭುವನೇಶ್ವರಿ ದಿಬ್ಬಣ:
ಸಮ್ಮೇಳನಾಧ್ಯಕ್ಷರನ್ನು ಕನ್ನಡ ಭುವನೇಶ್ವರಿಯ ದಿಬ್ಬಣದ ಮೂಲಕ ವೇದಿಕೆಗೆ ಕರೆ ತರಲಾಯಿತು. ಪೆರ್ಲಂಪಾಡಿ ಮೇಲಿನ ಪೇಟೆಯಿಂದ ಹೊರಟ ದಿಬ್ಬಣ ಕನ್ನಡ ಘೋಷಣೆಗಳನ್ನು ಕೂಗುತ್ತಾ ಸಮಾರಂಭದ ವೇದಿಕೆಗೆ ಬಂತು. ಮೆರವಣಿಗೆಯಲ್ಲಿ ನೂರಾರು ವಿದ್ಯಾರ್ಥಿಗಳು, ಕನ್ನಡಾಭಿಮಾನಿಗಳು ಭಾಗವಹಿಸಿದ್ದರು. ಮೆರವಣಿಗೆ ಸಾಗುವ ಉದ್ದಕ್ಕೂ ರಸ್ತೆಯಲ್ಲಿ ತೋರಣವನ್ನು ಕಟ್ಟಿ ಶೃಂಗಾರ ಮಾಡಲಾಗಿತ್ತು. ಕನ್ನಡದ ಸಾಹಿತ್ಯ ಲೋಕದ ಕುರಿತು ಅಷ್ಟಾಗಿ ಗೊತ್ತಿಲ್ಲದ ಗ್ರಾಮೀಣ ಜನರು ಸಮಾರಂಭದಲ್ಲಿ ಉತ್ಸಾಹದಲ್ಲಿ ಭಾಗವಹಿಸುವ ಮೂಲಕ ಸಾಹಿತ್ಯ ಸಮ್ಮೇಳನಕ್ಕೆ ಮೆರುಗು ನೀಡಿದರು. ಮೆರವಣಿಗೆಯನ್ನು ಕೊಳ್ತಿಗೆ ಗ್ರಾಪಂ ಅಧ್ಯಕ್ಷೆ ಗಿರಿಜಾದನಂಜಯ ಪೂಜಾರಿ ಉದ್ಘಾಟಿಸಿದರು. ಕೆ. ಆರ್ ದೇವಕಿ ಕೆಮ್ಮಾರ ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡಿದರು.
ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿಯವರು ರಾಷ್ಟ್ರದ್ವಜಾರೋಹಣ ಮಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಪ್ರದೀಪ್‌ಕುಮಾರ್ ಕಲ್ಕೂರ ಅವರು ಪರಿಷತ್ ಧ್ವಜಾರೋಹಣ ಮಾಡಿದರು. ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ ಸಮ್ಮೇಳನದ ದ್ವಜಾರೋಹಣ ಮಾಡಿದರು.
ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ಸಾಕ್ಷಿಯಾದರು. ಬೆಳಿಗ್ಗೆ ಉಪಹಾರ ಮತ್ತು ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಐತಪ್ಪ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ ಕಲ್ಕೂರ ಆಶಯ ಭಾಷಣ ಮಾಡಿದರು. ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್ ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ ಎಸ್, ಗಂಗಾದರ ಗೌಡ ಕೆಮ್ಮಾರ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾಪಂ ಸದಸ್ಯ ರಾಮ ಪಾಂಬಾರು. ಡಾ. ಅವಿನಾಶ್ ಕಲ್ಲೂರಾಯ, ಮಂಗಳೂರು ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ವಿಜಯಲಕ್ಷ್ಮಿ ಬಿ. ಶೆಟ್ಟಿ, ಪುತ್ತೂರು ತಾಲೂಕು ಕನ್ನಡ ಪರಿಷತ್ ಗೌರವಾಧ್ಯಕ್ಷ ಎನ್. ಕೆ ಜಗನ್ನಿವಾಸ ರಾವ್, ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷ ಎ.ವಿ ನಾರಾಯಣ ಹಾಜರಿದ್ದರು.
ಕೆ. ಆರ್ ಲಕ್ಷ್ಮಣ ಗೌಡ ಕುಂಟಿಕಾನ ಸ್ವಾಗತಿಸಿದರು , ಲೋಕಯ್ಯ ಡಿ ವಂದಿಸಿದರು. ಶಿವರಾಮ ಅಮಳ ಕಾರ್ಯಕ್ರಮ ನಿರೂಪಿಸಿದರು.







