ಡಿಜಿಟಲ್ ಗ್ರಾಮವಾಗುವತ್ತ ಅರಂತೋಡು ಗ್ರಾಮ
ಸುಳ್ಯ , ಡಿ. 30 : ಅರಂತೋಡು ಗ್ರಾಮವನ್ನು ಡಿಜಿಟಲ್ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ವಿಶೇಷ ಗ್ರಾಮ ಸಭೆಯು ಜ.6ರಂದು ಪೂರ್ವಾಹ್ನ 11ಕ್ಕೆ ಅರಂತೋಡು ತೆಕ್ಕಿಲ್ ಸಮುದಾಯಭವನದಲ್ಲಿ ನಡೆಯಲಿದೆ.
ಅರಂತೋಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ ಪ್ರತಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಪ್ರಧಾನ ಮಂತ್ರಿಯವರ ಹೊಸ ಆರ್ಥಿಕ ನೀತಿಯ ಪರಿಣಾಮ ದೇಶದಲ್ಲಿ ಕ್ರಾಂತಿಯಾಗುತ್ತಿದೆ. ದೇಶವಾಸಿಗಳಲ್ಲಿ ಹೊಸ ಕನಸು ಮೂಡಿದೆ. ಇದರೊಂದಿಗೆ ಹೆಜ್ಜೆ ಹಾಕಬೇಕಾದುದು ನಮ್ಮ ಕರ್ತವ್ಯ, ಅಲ್ಲದೇ ವಿಜಯ ಬ್ಯಾಂಕ್ ದೇಶದ ನೂರು ಗ್ರಾಮಗಳನ್ನು ಡಿಜಿಟಲ್ ಗ್ರಾಮವನ್ನಾಗಿಸುವ ಗುರಿ ಹೊಂದಿದ್ದು ಅರಂತೋಡು ಗ್ರಾಮವನ್ನೂ ಆಯ್ಕೆ ಮಾಡಿದೆ. ಅರಂತೋಡಿನಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘ ಮತ್ತು ವಿಜಯ ಬ್ಯಾಂಕ್ ಒಂದಕ್ಕೊಂದು ಪೂರಕವಾಗಿ ಈ ಯೋಜನೆಯಲ್ಲಿ ತೊಡಗಿಸಿಕೊಳ್ಳುತ್ತದೆಎಂದರು.
ಈ ವಿಶೇಷ ಗ್ರಾಮ ಸಭೆಯಲ್ಲಿ ಪಂಚಾಯತ್ ಪ್ರತಿನಿಧಿಗಳು, ಸಹಕಾರಿ ಸಂಘದ ಅಧ್ಯಕ್ಷರು, ನಿರ್ದೇಶಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಗ್ರಾಮಸ್ಥರು ಹಾಗೂ 8ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳು ಹೊಸ ವಿಜಯ ಬ್ಯಾಕ್ ಖಾತೆ ತೆರೆಯಲು ರೇಶನ್ ಕಾರ್ಡ್, ಆಧಾರ್ ಕಾರ್ಡ್ ಪ್ರತಿ ಹಾಗೂ 2 ಭಾವಚಿತ್ರಗಳೊಂದಿಗೆ ಸಭೆಗೆ ಹಾಜರಾಗಬಹುದು ಎಂದು ಅವರು ಹೇಳಿದರು.
ವಿಜಯ ಬ್ಯಾಂಕ್ ಮೇನೇಜರ್ ಉದ್ದವ್ ಶರ್ಮ ಮಾತನಾಡಿ, ವಿಜಯ ಬ್ಯಾಂಕ್ ಡಿಜಿಟಲ್ ಗ್ರಾಮ ಯೋಜನೆಗೆ ಅರಂತೋಡು ಗ್ರಾಮವನ್ನು ಆಯ್ಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮುಂದೆ ಬ್ಯಾಂಕಿನ ಎಲ್ಲ ಕಾರ್ಯಚಟುವಟಿಕೆಯನ್ನು ಡಿಜಿಟಲೀಕರಣಗೊಳಿಸುವತ್ತ ಹೆಜ್ಜೆ ಇಡುತ್ತೇವೆ. ಅರಂತೋಡಿನಲ್ಲಿ 120 ಮೀಟರ್ ವ್ಯಾಪ್ತಿಯಲ್ಲಿ ಉಚಿತ ವೈಫೈ ಸೇವೆ ನೀಡಲಾಗುವುದು. ಸ್ವೈಪಿಂಗ್ ಯಂತ್ರವನ್ನೂ ವಿತರಿಸಲಾಗುವುದು ಎಂದರು.
ಈ ಯೋಜನೆಯನ್ನು ಅಭಿಯಾನ ರೂಪದಲ್ಲಿ ಮಾಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಸೊಸೈಟಿ ವತಿಯಿಂದ ಸ್ವಯಂ ಸೇವಕರನ್ನು ನೇಮಿಸಿ ಬೈಲುವಾರು ಕ್ಷೇತ್ರ ಕಾರ್ಯ ನಡೆಸಲಾಗುವುದು ಎಂದು ಅರಂತೋಡು ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಹೇಳಿದರು.
ತಾಲೂಕು ಗ್ರಾ.ಪಂ. ಒಕ್ಕೂಟದ ಸಂಚಾಲಕ ಹರೀಶ್ ರೈ ಉಬರಡ್ಕ, ಅರಂತೋಡು ಸೊಸೈಟಿ ಉಪಾಧ್ಯಕ್ಷ ದಯಾನಂದ ಕುರುಂಜಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್, ವಿಜಯ ಬ್ಯಾಂಕ್ ಸಿಬ್ಬಂದಿ ಮೋಹನ್, ಗ್ರಾ.ಪಂ. ಅಕೌಟೆಂಟ್ ಅನಿತಾ ಉಪಸ್ಥಿತರಿದ್ದರು.







