ಕೊಳವೆಬಾವಿ ಕೊರೆಯುವುದನ್ನು ತಡೆಗಟ್ಟುವ ಆದೇಶ ರದ್ದತಿಗೆ ಆಗ್ರಹಿಸಿ ಡಿಸಿ ಕಚೇರಿ ಮುಂದೆ ಧರಣಿ
ಮಂಗಳೂರು, ಡಿ.30: ಕೊಳವೆಬಾವಿ ಕೊರೆಯುವುದನ್ನು ತಡೆಗಟ್ಟುವ ರಾಜ್ಯ ಸರಕಾರದ ಆದೇಶದ ವಿರುದ್ಧ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ದ.ಕ., ಉಡುಪಿ ಜಿಲ್ಲೆಯ ಸಾರ್ವಜನಿಕರ ಸಹಯೋಗದಲ್ಲಿ ಜ.3ರಂದು ಪೂ.11ಕ್ಕೆ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ರವಿಕುಮಾರ್ ಪುಣಚ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅವಳಿ ಜಿಲ್ಲೆಗಳು ಭೌಗೋಳಿಕವಾಗಿ ಗುಡ್ಡಗಾಡು ಮತ್ತು ಇಳಿಜಾರನ್ನು ಹೊಂದಿದೆ. ಮಳೆನೀರು ಸಂಗ್ರಹಣೆಗೆ ಪ್ರಾಕೃತಿಕವಾಗಿ ಯಾವುದೇ ರೀತಿಯ ಅನುಕೂಲಗಳಿಲ್ಲ. ಕೃಷಿಗಾಗಿ ಯಾವುದೇ ನೀರಾವರಿ ಯೋಜನೆಗಳು ಅನುಷ್ಠಾನ ಆಗದಿರುವುದು ಇಲ್ಲಿಯ ತನಕ ಆಡಳಿತ ನಡೆಸಿದ ಸರಕಾರಗಳ ಇಚ್ಛಾಶಕ್ತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದರು.
ರಾಜ್ಯ ಸರಕಾರವು ಕೊಳವೆಬಾವಿ ಕೊರೆಯುವುದನ್ನು ತಡೆಗಟ್ಟುವ ಆದೇಶವನ್ನು ಹೊರಡಿಸಿರುವುದು ಅವಳಿ ಜಿಲ್ಲೆಯ ರೈತರಿಗೆ ಮತ್ತು ನಾಗರಿಕರಿಗೆ ಮರಣಶಾಸನವಾಗಿದೆ. ಅವಳಿ ಜಿಲ್ಲೆಯಲ್ಲಿ ಬೆಳೆದು ನಿಂತ ಕೃಷಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರ ಮೂಲಭೂತ ಸೌಕರ್ಯವಾದ ಕುಡಿಯುವ ನೀರಿನ ವ್ಯವಸ್ಥೆಗಾಗಿ ಈ ಮೇಲಿನ ಆದೇಶವನ್ನು ರದ್ದುಪಡಿಸಲು ಆಗ್ರಹಿಸಿ ಈ ಪ್ರತಿಭಟನೆಯನ್ನು ಆಯೋಜಿಸಿದೆ ಎಂದು ರವಿಕುಮಾರ್ ಪುಣಚ ತಿಳಿಸಿದರು.
ಆರ್ಥಿಕವಾಗಿ ಸದೃಢರು ಕೊಳವೆಬಾವಿ ಕೊರೆಸಲು ಮುಂದಾಗಿದ್ದಾರೆ. ಆದರೆ ಬಡ ಜನತೆಗೆ ಇದು ಅಸಾಧ್ಯವಾಗಿದೆ. ಪ್ರತಿ 3ರಿಂದ 5 ಕಿ.ಮೀ.ಗೆ ಒಂದು ಡ್ಯಾಮ್‌ನ್ನು ಕಟ್ಟಬೇಕು. ಇದರಿಂದ ಅಂತರ್ಜಲ ಹೆಚ್ಚುತ್ತದೆ. ಮರಳನ್ನು ಸಂಗ್ರಹ ಮಾಡುವುದು ಸುಲಭವಾಗುತ್ತದೆ. ಮಣ್ಣಿನ ಸವಕಳಿಯನ್ನು ತಡೆಗಟ್ಟಬಹುದಾಗಿದೆ. ಮೂಲಭೂತ ಹಕ್ಕನ್ನು ಸರಕಾರ ಕಸಿದುಕೊಳ್ಳುತ್ತಿದ್ದು, ಹಿಂಪಡೆಯಲು ಹೋರಾಟ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.







