ಒಂಟಿಯಾಗಿ ಮನೆಯಲ್ಲಿದ್ದ ವೃದ್ಧೆಯ ಕೊಲೆ: ಮುಂದುವರಿದ ತನಿಖೆ

ಪುತ್ತೂರು , ಡಿ.30 : ಪುತ್ತೂರು ನಗರದ ಹೊರವಲಯದ ಹಾರಾಡಿ ಸಮೀಪದ ಕಾರಡ್ಕ ಎಂಬಲ್ಲಿ ಒಂಟಿಯಾಗಿ ವಾಸವಾಗಿದ್ದ ವೃದ್ಧೆ ಪ್ರಮೋದಿನಿ (77) ಅವರಲ್ಲಿ ಅಪಾರ ಮೊತ್ತದ ಹಣ ಹಾಗೂ ಚಿನ್ನಾಭರಣ ಇರಬಹುದು ಎಂದು ಶಂಕಿಸಿ ದರೋಡೆಗಾಗಿ ಕೊಲೆ ಮಾಡಿರುವುದು ಸ್ಪಷ್ಟವಾಗಿದ್ದು, ವಿನೋದಿನಿ ಅವರ ಪರಿಚಯವಿರುವ ಮಂದಿಯೇ ಈ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸ್ ತನಿಖೆ ಮುಂದುವರಿದಿದೆ.
ಮೂಲತಃ ಪುತ್ತೂರು ನಗರದ ಹೊರವಲಯದ ಬನ್ನೂರಿನವರಾಗಿದ್ದು , ಪ್ರಸ್ತುತ ಹಾರಾಡಿ ಸಮೀಪದ ಕಾರಡ್ಕ ಎಂಬಲ್ಲಿ ಗೋಪಿನಾಥ್ ಎಂಬವರ ಮಾಲಕತ್ವದ ಬಾಡಿಗೆ ಮನೆಯಲ್ಲಿ ಕಳೆದ 8 ವರ್ಷಗಳಿಂದ ಒಂಟಿಯಾಗಿ ವಾಸವಾಗಿದ್ದರು. ವಿನೋದಿನ ಅವರು ವಾಸವಾಗಿದ್ದ ಬಾಡಿಗೆ ಮನೆಯ ಇನ್ನೊಂದು ಪಾರ್ಶ್ವದಲ್ಲಿ ವಾಸ್ತವ್ಯವಿದ್ದ ರಾಮಯ್ಯ ಬಲ್ಲಾಳ್ ಎಂಬವರು ಮನೆಯವರೊಂದಿಗೆ ಬೇರೆ ಕಡೆಗೆ ತೆರಳಿದವರು ಕಳೆದ ಕಳೆದ ಗುರುವಾರ (ಡಿ.22ರಂದು) ಮನೆಗೆ ಹಿಂತಿರುಗಿ ಬಂದಿದ್ದ ವೇಳೆ ವಿನೋದಿನಿ ಅವರ ಬಾಡಿಗೆ ಕೊಠಡಿಗೆ ಬೀಗ ಹಾಕಲಾಗಿತ್ತು.
ಆದರೆ ರಾಮಯ್ಯ ಬಲ್ಲಾಳ್ ಮನೆಯವರು ವಿನೋದಿನಿ ಅವರು ಸಂಬಂಧಿಕರ ಮನೆಗೆ ತೆರಳಿರಬಹುದೆಂದು ಶಂಕಿಸಿದ್ದರು. ಆದರೆ ದಿನ ಕಳೆದಂತೆ ಆ ಕೊಠಡಿಯಿಂದ ದುರ್ವಾಸನೆ ಬರಲಾರಂಭಿಸಿತ್ತು. ದುರ್ವಾಸನೆ ಅತಿಯಾದ ಹಿನ್ನಲೆಯಲ್ಲಿ ರಾಮಯ್ಯ ಬಲ್ಲಾಳ್ ಅವರ ಪತ್ನಿ ನಳಿನಾಕ್ಷಿ ಎಂಬವರು ನೀಡಿದ ಮಾಹಿತಿಯಂತೆ ಬಾಡಿಗೆ ಮನೆಯ ಮಾಲಿಕ ಗೋಪಿನಾಥ್ ಅವರು ಬೆಂಗಳೂರಿನಲ್ಲಿ ಪತಿ ಮನೆಯಲ್ಲಿ ವಾಸ್ತವ್ಯವಿರುವ ವಿನೋದಿನಿ ಅವರ ಪುತ್ರಿ ಮೈತ್ರಿ ಅವರನ್ನು ಸಂಪರ್ಕಿಸಿ ಬಳಿಕ ಪುತ್ತೂರು ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿ ಬೀಗ ಮುರಿದು ಒಳಪ್ರವೇಶಿಸಿದ ವೇಳೆ ಬಾಯಿ ಮತ್ತು ಮುಖಕ್ಕೆ ಬಟ್ಟೆ ಸುತ್ತಿ, ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಕೊಳೆತ ವಿನೋದಿನಿ ಅವರ ಮೃತದೇಹ ಪತ್ತೆಯಾಗಿತ್ತು.
ಕೃಷ್ಣಮೂರ್ತಿ ಎಂಬವರ ಪತ್ನಿಯಾಗಿದ್ದ ವಿನೋದಿನಿ ಅವರು ಬನ್ನೂರಿನಲ್ಲಿರುವ ತನ್ನ ಸ್ವಂತ ಮನೆಯಲ್ಲಿ ಬೀಡಿಗೆ ಲೇಬಲ್ ಹಾಕುವ ಕಾಯಕ ನಡೆಸುವ ಮೂಲಕ ಜೀವನ ಸಾಗಿಸುತ್ತಿದ್ದರು. ಪುತ್ರಿ ಮೈತ್ರಿ ಅವರ ವಿವಾಹದ ಬಳಿಕವೂ ಅಲ್ಲೇ ಒಂಟಿಯಾಗಿ ವಾಸ್ತವ್ಯವಿದ್ದರು. ಮೈತ್ರಿ ಅವರು ಬೆಂಗಳೂರಿನಲ್ಲಿ ಶಿಕ್ಷಕಿಯಾಗಿದ್ದು, ಅವರ ಪತಿ ಸುಧಾಕರ್ ಅವರು ಬೆಂಗಳೂರಿನಲ್ಲಿ ಟ್ರಾವೆಲ್ ಏಜೆನ್ಸಿ ಉದ್ಯೋಗ ಮಾಡುತ್ತಿದ್ದಾರೆ.
ಬನ್ನೂರಿನಲ್ಲಿ ಒಂಟಿಯಾಗಿ ಜೀವಿಸುತ್ತಿದ್ದ ತಾಯಿಯನ್ನು ಮೈತ್ರಿ ಅವರು 8 ವರ್ಷದ ಹಿಂದೆ ಬೆಂಗಳೂರಿಗೆ ಬರುವಂತೆ ಒತ್ತಾಯಿಸಿದ ಕಾರಣ ಅವರು ಬನ್ನೂರಿನ ಮನೆ-ಜಾಗವನ್ನು ಮಾರಾಟ ಮಾಡಿ ಬೆಂಗಳೂರಿನಲ್ಲಿರುವ ಪುತ್ರಿಯ ಮನೆಗೆ ಹೋಗಿದ್ದರು. ಅಸ್ತಮ ಪೀಡಿತರಾಗಿದ್ದ ವಿನೋದಿನಿ ಅವರಿಗೆ ಬೆಂಗಳೂರಿನ ವಾತಾವರಣ ಸರಿಯಾಗದ ಕಾರಣ ಬಳಿಕ ಹಿಂತಿರುಗಿ ಬಂದು ಹಾರಾಡಿ ಸಮೀಪದ ಕಾರಡ್ಕದಲ್ಲಿ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸ್ತವ್ಯವಿದ್ದರು.
ಹಣ-ಆಭರಣವಿರಬಹುದೆಂದು ಭಾವಿಸಿ ಕೃತ್ಯ: ಶಂಕೆ
ಬೀಡಿಗೆ ಲೇಬಲ್ ಹಾಕುವ ಕೆಲಸ ಮಾಡುತ್ತಿದ್ದ ವಿನೋದಿನಿ ಅವರು ನಿವೃತ್ತಿಯ ಬಳಿಕ ದೊರೆತ ಪಿ.ಎಫ್ ಹಣ, ಬನ್ನೂರಿನ ಮನೆ ಮಾರಾಟ ಮಾಡಿದ ಹಣ ಹಾಗೂ ವಿಧವಾ ವೇತನದಲ್ಲಿ ಜೀವನ ಸಾಗಿಸುತ್ತಿದ್ದರು. ಈ ವಿಚಾರಗಳನ್ನರಿತಿದ್ದ ಮಂದಿಯೇ ಆಕೆಯಲ್ಲಿ ಅಪಾರ ಹಣ ಮತ್ತು ಚಿನ್ನಾಭರಣ ಇರಬಹುದು ಎಂದು ಶಂಕಿಸಿ ಕೊಲೆ ನಡೆಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.
ಆದರೆ ವಿನೋದಿನಿ ಅವರ ಕುತ್ತಿಗೆಯಲ್ಲಿದ್ದ ಮೂರು ಪವನ್ ತೂಕದ ಚಿನ್ನದ ಸರ, ಚಿನ್ನದ ಕಿವಿ ಬೆಂಡೋಲೆ ಹಾಗೂ ಚಿಲ್ಲರೆ ಹಣ ಬಿಟ್ಟರೆ ಬೇರಾವುದೂ ಇರಲಿಲ್ಲ. ತನ್ನಲ್ಲಿದ್ದ ಸ್ವಲ್ಪ ಪ್ರಮಾಣದ ಹಣವನ್ನು ಅವರು ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದರು ಎಂದು ಮಾಹಿತಿ ಲಭಿಸಿದೆ.
ವಿನೋದಿನಿ ಅವರ ಪುತ್ರಿ ಹಾಗೂ ಆಕೆಯ ಪತಿ ಸ್ಥಿತಿವಂತರಾಗಿದ್ದು, ವಿನೋದಿನಿ ಅವರಲ್ಲಿ ದೊಡ್ಡ ಮೊತ್ತದ ಹಣ ಇರಬಹುದು ಎಂದು ಲೆಕ್ಕಹಾಕಿದ್ದ ದುಷ್ಕರ್ಮಿಗಳು ಅವರು ವಾಸ್ತವ್ಯವಿದ್ದ ಬಾಡಿಗೆ ಮನೆಯ ಪಕ್ಕದ ನಿವಾಸಿಗಳು ಮನೆಯಿಂದ ಬೇರೆಡೆಗೆ ತೆರಳಿದ್ದ ಸಂದರ್ಭ ನೋಡಿಕೊಂಡು ಈ ಕೃತ್ಯ ಎಸಗಿದ್ದಾರೆ. ವಿನೋದಿನಿ ಅವರ ಮನೆ ದರೋಡೆ ಮಾಡಿದ ಆರೋಪಿಗಳು ತಮ್ಮ ಪರಿಚಯವಿರುವ ಕಾರಣದಿಂದಲೇ ಅವರನ್ನು ಕೊಲೆ ಮಾಡಿದ್ದಾರೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ವಿನೋದಿನಿ ಅವರ ತಲೆಯ ಭಾಗದಲ್ಲಿ ಗಾಯವಾಗಿದ್ದು, ಮೃತದೇಹ ಪತ್ತೆಯಾದ ಕೋಣೆಯ ಗೋಡೆ ಮತ್ತು ಸೋಫಾದಲ್ಲಿ ರಕ್ತದ ಕಲೆಗಳು ಕಂಡು ಬಂದಿವೆ. ಕಪಾಟಿನ ಬಾಗಿಲು ತೆರೆದು ಅದರಲ್ಲಿದ್ದ ಬಟ್ಟೆ ಬರೆಗಳನ್ನು ಚೆಲ್ಲಾಪಿಲ್ಲಿಗೈದು ಹಣ ಮತ್ತು ಆಭರಣಕ್ಕಾಗಿ ಜಾಲಾಡಿರುವುದು ಕಂಡು ಬಂದಿದೆ. ಕೈಕಾಲು ಕಟ್ಟಿ, ಬಾಯಿ ಮತ್ತು ಮುಖಕ್ಕೆ ಬಟ್ಟೆ ಸುತ್ತಿ ದರೋಡೆಗೈಯಲು ಮುಂದಾದ ಆರೋಪಿಗಳು ತಮ್ಮ ಪರಿಚಯ ಸಿಕ್ಕಿತು ಎಂಬ ಕಾರಣಕ್ಕಾಗಿಯೇ ಆಕೆಯನ್ನು ಕೊಲೆಗೈದು ಬಾಡಿಗೆ ಮನೆಗೆ ಬೀಗ ಹಾಕಿ ತೆರಳಿರುವುದು ಬಹುತೇಕ ಸ್ಪಷ್ಟವಾಗಿದೆ.
ಇಲ್ಲದಿದ್ದಲ್ಲಿ ಕೈಕಾಲು ಕಟ್ಟಿ, ಬಾಯಿ ಮತ್ತು ಮುಖಕ್ಕೆ ಬಟ್ಟೆ ಸುತ್ತಿ ದರೋಡೆ ಮಾಡಲು ಮುಂದಾದವರು ಆಕೆಯನ್ನು ಜೀವಂತವಾಗಿ ಬಿಟ್ಟು ಹೋಗುವ ಸಾಧ್ಯತೆಯೇ ಹೆಚ್ಚಿತ್ತು ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.
ವಿನೋದಿನಿ ಅವರ ಬಳಿ 1ಚಿನ್ನದ ಸರ, ಕಿವಿಯ ಬೆಂಡೋಲೆ ಸೇರಿ ಒಟ್ಟು 24ಗ್ರಾಂ ಚಿನ್ನ, ಮನೆಯಲ್ಲಿದ್ದ ಸಣ್ಣ ಪ್ರಮಾಣದ ನಗದು ದರೋಡೆ ನಡೆದಿದೆ. ದರೋಡೆ ಸಂದರ್ಭ ವಿನೋದಿನಿ ಅವರ ಕೈಕಾಲುಗಳನ್ನು ಕಟ್ಟಿಹಾಕಿ ಬಾಯಿಗೆ ಬಟ್ಟೆ ತುರುಕಲಾಗಿದೆ. ದರೋಡೆಕೋರು ಪರಿಚಿತ ವ್ಯಕ್ತಿಯಾಗಿದ್ದು, ಯಾವುದೇ ಸಾಕ್ಷಿ ಸಿಗದಂತೆ ಮಾಡಲು ವೃದ್ದೆಯನ್ನು ಕೊಲೆಗೈಯ್ಯಲಾಗಿದೆ. ಈ ಬಗ್ಗೆ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ತೆಗಾಗಿ ವಿಶೇಷ ತಂಡ ರಚನೆ
ಘಟನಾ ಸ್ಥಳಕ್ಕೆ ಶುಕ್ರವಾರ ಎಸ್ಪಿ ಭೂಷಣ್ ಗುಲಾಬ್ ರಾವ್ ಬೋರಸೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ಉನ್ನತ ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪುತ್ತೂರಿನ ಎಎಸ್ಪಿ ರಿಷ್ಯಂತ್ ಅವರ ನೇತೃತ್ವದ ವಿಶೇಷ ತಂಡ ರಚಿಸಲಾಗಿದೆ. ಲಾಭದ ಉದ್ದೇಶದಿಂದಲೇ ನಡೆದ ಕೃತ್ಯ ಎಂಬುವುದು ಸ್ಪಷ್ಟವಾಗಿದೆ.ವಿನೋದಿನಿ ಅವರಲ್ಲಿ ಚಿನ್ನದ ಸರ ಮತ್ತು ಬೆಂಡೋಲೆ ಬಿಟ್ಟರೆ ಬೇರೇನೂ ಆಸ್ತಿ ಇರಲಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.







