ಕೆಎಸ್ಸಾರ್ಪಿ ಪೊಲೀಸರಿಗೆ ಠಾಣೆಗಳಲ್ಲೂ ಕೆಲಸ: ಡಾ.ಜಿ.ಪರಮೇಶ್ವರ್

ಬೆಂಗಳೂರು, ಡಿ.30: ಕೆಎಸ್ಸಾರ್ಪಿ ಪೊಲೀಸ್ ಸಿಬ್ಬಂದಿಗಳು ಪೊಲೀಸ್ ಠಾಣೆಗಳಲ್ಲಿಯೂ ಕಾರ್ಯನಿರ್ವಹಿಸುವಂತೆ ಅನುವು ಮಾಡಿಕೊಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಶುಕ್ರವಾರ ಕರ್ನಾಟಕ ರಾಜ್ಯ 4ನೆ ಮೀಸಲು ಪೊಲೀಸ್ ಪಡೆ ಕೋರಮಂಗಲ ಆವರಣದಲ್ಲಿ ಆಯೋಜಿಸಿದ್ದ ಮಹಿಳಾ ಸಿಬ್ಬಂದಿ ಬ್ಯಾರಕ್ ನಿರ್ಮಾಣದ ಶಂಕು ಸ್ಥಾಪನೆ ಹಾಗೂ ಕೆಎಸ್ಸಾರ್ಪಿಯ 1100ಕ್ಕೂ ಹೆಚ್ಚು ಪೊಲೀಸರಿಗೆ ಪದೋನ್ನತಿ ನೀಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸುಮಾರು 12ಲಕ್ಷಕ್ಕೂ ಹೆಚ್ಚು ಕೆಎಸ್ಸಾರ್ಪಿ ಸಿಬ್ಬಂದಿಗಳಿದ್ದಾರೆ. ಅವರನ್ನು ಪ್ರತಿಭಟನೆ, ಬಂದ್ ಸೇರಿದಂತೆ ಕೆಲವೊಂದು ಸೀಮಿತ ಕೆಲಸಗಳಿಗೆ ಮಾತ್ರ ನಿಯೋಜಿಸಲಾತ್ತಿದೆ. ಅವರು ಬಹುತೇಕ ಸಮಯವನ್ನು ಪೊಲೀಸ್ ಬಸ್, ವ್ಯಾನ್‌ಗಳಲ್ಲಿಯೇ ಬಂಧಿಸಿಡಲಾಗಿದೆ. ಹೀಗಾಗಿ ಅವರನ್ನು ವಾರಕ್ಕೆ ಎರಡು ಇಲ್ಲವೆ ಮೂರು ದಿನಗಳನ್ನು ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸುವಂತೆ ಕಾರ್ಯ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ತಮಿಳುನಾಡಿನಲ್ಲಿಯೂ ಕೆಎಸ್ಸಾರ್ಪಿ ಸಿಬ್ಬಂದಿಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಅದರ ಸಂಪೂರ್ಣ ಮಾಹಿತಿಯನ್ನು ಪಡೆದು ರಾಜ್ಯದಲ್ಲಿ ಜಾರಿ ಮಾಡಲಾಗುವುದು. ಇದರಿಂದ ಪೊಲೀಸ್ ಇಲಾಖೆಗೆ ಮತ್ತಷ್ಟು ಶಕ್ತಿ ತಂದು, ಅಪರಾಧ ಚಟುವಟಿಕೆ ಸೇರಿದಂತೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಪೊಲೀಸ್ ಇಲಾಖೆಯಲ್ಲಿ ಕೆಎಸ್ಸಾರ್ಪಿ ಸಿಬ್ಬಂದಿಗಳು ಅತ್ಯಂತ ಕಷ್ಟ ಹಾಗೂ ಪರಿಣಾಮಕಾರಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರಿಗೆ ಸಿಗುತ್ತಿರುವ ಸೌಲಭ್ಯಗಳು ಮಾತ್ರ ಅತ್ಯಂತ ಸೀಮಿತವಾಗಿದೆ. ಕೆಳದರ್ಜೆಯ ಪೊಲೀಸರಿಗೆ ಭಡ್ತಿ ಸಿಗುವುದು ಮರೀಚಿಕೆಯಾಗಿದೆ. ಹೀಗಾಗಿ ಪೊಲೀಸ್ ಸಿಬ್ಭಂದಿಗಳಿಗೆ ಸಕಲ ಸೌಲಭ್ಯಗಳನ್ನು ನೀಡುವ ಸಲುವಾಗಿ ನಮ್ಮ ಸರಕಾರ ಎಲ್ಲ ರೀತಿಯ ಕಾರ್ಯಯೋಜನೆಗಳನ್ನು ರೂಪಿಸುತ್ತಿದೆ ಎಂದು ಸಚಿವ ಪರಮೇಶ್ವರ್ ಹೇಳಿದರು.
ಭಡ್ತಿ ನಿರಂತರ: ಒಬ್ಬ ಪೊಲೀಸ್ ಸಿಬ್ಬಂದಿಗೆ ಒಮ್ಮೆ ಭಡ್ತಿ ಸಿಗುವಷ್ಟರಲ್ಲಿ, ಇತರೆ ಇಲಾಖೆಯ ಸಿಬ್ಬಂದಿಗಳಿಗೆ ಮೂರು, ನಾಲ್ಕು ಭಡ್ತಿ ಸಿಕ್ಕಿರುತ್ತದೆ. ಇಂತಹ ತಾರತಮ್ಯ ವನ್ನು ಹೋಗಲಾಡಿಸುವ ಸಲುವಾಗಿ ಅರ್ಹತೆಗೆ ತಕ್ಕನಾಗಿ ಭಡ್ತಿ ನೀಡುವುದನ್ನು ನಿರಂತರಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಬಹುತೇಕ ಸಮಯ ಬಸ್‌ನಲ್ಲಿಯೇ ಕಳೆಯುವ ಕೆಎಸ್ಸಾರ್ಪಿ ಸಿಬ್ಬಂದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ 150 ವೋಲ್ವೊ ಬಸ್‌ಗಳನ್ನು ಖರೀದಿ ಮಾಡಲಾಗಿದೆ. ಪೊಲೀಸರು ತಮ್ಮ ದಿನನಿತ್ಯದ ಸಾಮಗ್ರಿಗಳು, ರೈಫಲ್‌ಗಳು ಸೇರಿದಂತೆ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ಬಸ್‌ನಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯ, ಡಿಜಿಪಿ ಸುಶಾಂತ್ ಮಹಾಪಾತ್ರ, ಎಡಿಜಿಪಿ ಟಿ.ಸುನೀಲ್ ಕುಮಾರ್, ಕೆಎಸ್ಸಾರ್ಪಿಯ ಎಡಿಜಿಪಿ ಕಮಲ್ ಪಂತ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕೆಎಸ್ಸಾರ್ಪಿ ಮಹಿಳಾ ತುಕಡಿಯನ್ನು ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ಪ್ರಾರಂಭಿಸಲಾಗಿದೆ. ಈಗಾಗಲೆ ಸುಮಾರು 47ಮಹಿಳಾ ಸಿಬ್ಬಂದಿಗಳು ತರಬೇತಿ ಪಡೆದಿದ್ದಾರೆ. ಇವರಿಗೆ ವಾಸಿಸಲು ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸುಮಾರು 5ಕೋಟಿ ರೂ.ವೆಚ್ಚದಲ್ಲಿ ಹಾಸ್ಟೆಲ್‌ನ್ನು ನಿರ್ಮಿಸಲಾಗುತ್ತಿದೆ.
-ಡಾ.ಜಿ.ಪರಮೇಶ್ವರ್ ಗೃಹ ಸಚಿವರು.







