ಹೆದ್ದಾರಿ ತಡೆ ಕಂಬಕ್ಕೆ ಬೈಕ್ ಢಿಕ್ಕಿ : ವಿದ್ಯಾರ್ಥಿ ಮೃತ್ಯು, ವಿದ್ಯಾರ್ಥಿನಿ ಗಂಭೀರ
ಐದು ಗಂಟೆಗಳ ಕಾಲ ರಸ್ತೆಯಲ್ಲಿ ಒದ್ದಾಡಿದ ವಿದ್ಯಾರ್ಥಿನಿ

ಉಡುಪಿ, ಡಿ.30: ಇಲ್ಲಿನ ಕರಾವಳಿ ಬೈಪಾಸ್‌ನ ಶಾರದಾ ಹೊಟೇಲಿನ ಬಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅಡ್ಡವಾಗಿ ಇಡಲಾದ ಕಂಬಕ್ಕೆ ಡಿ.30ರಂದು ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಮಣಿಪಾಲ ವೈದ್ಯಕೀಯ ವಿದ್ಯಾರ್ಥಿ ಮೃತಪಟ್ಟು, ಸಹಪಾಠಿ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಬೈಕ್ ಸವಾರ ಮಣಿಪಾಲ ಕೆಎಂಸಿಯ ಎಂಬಿಬಿಎಸ್ ಐದನೆ ಸೆಮಿಸ್ಟರ್‌ನ ವಿದ್ಯಾರ್ಥಿ, ಆಂಧ್ರಪ್ರದೇಶದ ಪವನ್ ಕುಮಾರ್ ರಾಘವನ್ (20) ಎಂದು ಗುರುತಿಸಲಾಗಿದೆ.
ಹಿಂಬದಿಯಲ್ಲಿದ್ದ ಆತನ ಸಹಪಾಠಿ ಸಾಕ್ಷಿ ಮಹೇಶ್ವರಿ(20) ಎಂಬವರು ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿಟ್ಟೂರು ಕಡೆಯಿಂದ ಉಡುಪಿ ಕಡೆ ಬರುತ್ತಿದ್ದ ಕೆಟಿಎಂ ಬೈಕ್ ಶಾರದಾ ಹೋಟೆಲಿನ ಸಮೀಪದ ಯುಟರ್ನ್ ಹತ್ತಿರದ ರಸ್ತೆ ಕಾಮಗಾರಿ ಜಾಗಕ್ಕೆ ಇತರ ವಾಹನಗಳು ಪ್ರವೇಶಿಸದಂತೆ ಇಡಲಾದ ತಡೆ ಕಂಬಕ್ಕೆ ಢಿಕ್ಕಿ ಹೊಡೆಯಿತು. ಇದರಿಂದ ಸವಾರರಿಬ್ಬರು ರಸ್ತೆ ಬದಿಗೆ ಎಸೆಯಲ್ಪಟ್ಟರು. ಇದರಲ್ಲಿ ಗಂಭೀರವಾಗಿ ಗಾಯಗೊಂಡು ಸವಾರ ಸ್ಥಳದಲ್ಲೇ ಮೃತಪಟ್ಟನು.
ಈ ಘಟನೆ ನಸುಕಿನ ವೇಳೆ ಎರಡು ಗಂಟೆಗೆ ನಡೆದಿದ್ದರೂ ಬೆಳಕಿಗೆ ಬಂದದ್ದು ಮಾತ್ರ ಇಂದು ಬೆಳಗ್ಗೆ 7ಗಂಟೆ ಸುಮಾರಿಗೆ. ಗಾಯಾಳು ಸಾಕ್ಷಿ ಸುಮಾರು ಐದು ಗಂಟೆಗಳ ಕಾಲ ರಸ್ತೆಯಲ್ಲಿ ಒದ್ದಾಟ ಮಾಡಿದ್ದಾಳೆ ಎನ್ನಲಾಗಿದೆ. ವಾಹನ ಪ್ರವೇಶಿಸಿದ ಜಾಗದಲ್ಲಿ ಈ ಅಪಘಾತ ಸಂಭವಿಸಿರುವುದರಿಂದ ಇದು ಯಾರ ಗಮನಕ್ಕೂ ಬಂದಿರಲಿಲ್ಲ.
ಬೆಳಗ್ಗೆ ಸಾರ್ವಜನಿಕರಿಂದ ದೊರೆತ ಮಾಹಿತಿಯಂತೆ ಸ್ಥಳಕ್ಕೆ ಧಾವಿಸಿದ ಸಮಾಜ ಸೇವಕ ವಿಶು ಶೆಟ್ಟಿ ಕೂಡಲೇ ಗಾಯಾಳು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







