ಸಿರಿಯದಲ್ಲಿ ಯುದ್ಧ ವಿರಾಮ: ರಶ್ಯ ಘೋಷಣೆ

ಮಾಸ್ಕೊ/ಅಂಕಾರ, ಡಿ. 30: ಸಿರಿಯ ಸರಕಾರ ಮತ್ತು ಪ್ರತಿಪಕ್ಷದ ನಡುವೆ ಗುರುವಾರ ಮಧ್ಯರಾತ್ರಿಯಿಂದ ಯುದ್ಧವಿರಾಮ ಜಾರಿಗೆ ಬಂದಿದೆ ಎಂದು ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಘೋಷಿಸಿದ್ದಾರೆ.
ಶಾಂತಿ ಮಾತುಕತೆಗಳನ್ನು ಆರಂಭಿಸಲೂ ಸಂಬಂಧಪಟ್ಟ ಪಕ್ಷಗಳು ಸಿದ್ಧವಾಗಿವೆ ಎಂದು ಪುಟಿನ್ ಹೇಳಿದರು. ಸುಮಾರು ಆರು ವರ್ಷಗಳ ಸಿರಿಯ ಯುದ್ಧಕ್ಕೆ ಶಾಂತಿಯುತ ಪರಿಹಾರ ಕಂಡುಹಿಡಿಯಲು ರಶ್ಯ, ಇರಾನ್ ಮತ್ತು ಟರ್ಕಿಗಳು ಉತ್ಸುಕತೆ ವ್ಯಕ್ತಪಡಿಸಿದ ಬಳಿಕ ಪುಟಿನ್ ಈ ಘೋಷಣೆ ಹೊರಡಿಸಿದ್ದಾರೆ.
ರಾಷ್ಟ್ರವ್ಯಾಪಿ ಯುದ್ಧವಿರಾಮ ಜಾರಿಗೆ ತರುವುದಾಗಿ ಸಿರಿಯ ಸೇನೆ ಘೋಷಿಸಿದೆ. ಆದರೆ, ಈ ಒಪ್ಪಂದದಿಂದ ಐಸಿಸ್ ಭಯೋತ್ಪಾದಕರು ಮತ್ತು ಮಾಜಿ ನುಸ್ರಾ ಫ್ರಂಟ್ ಉಗ್ರರು ಹಾಗೂ ಅವರೊಂದಿಗೆ ನಂಟು ಹೊಂದಿರುವ ಎಲ್ಲ ಗುಂಪುಗಳನ್ನು ಹೊರಗಿಡಲಾಗಿದೆ ಎಂದು ಸಿರಿಯ ಸೇನೆ ಘೋಷಿಸಿದೆ.
ಯುದ್ಧವಿರಾಮವನ್ನು ಪಾಲಿಸುವುದಾಗಿಯೂ, ಭವಿಷ್ಯದ ಮಾತುಕತೆಗಳಲ್ಲಿ ಪಾಲ್ಗೊಳ್ಳುವುದಾಗಿಯೂ ಬಂಡುಕೋರ ಗುಂಪುಗಳ ಒಕ್ಕೂಟ ‘ಫ್ರೀ ಸಿರಿಯನ್ ಸೇನೆ’ಯ ವಕ್ತಾರರೊಬ್ಬರು ಹೇಳಿದ್ದಾರೆ.
Next Story





