ಬಂಟ್ವಾಳ : ಇಂಜಿನಿಯರ್ ಸಮಯೋಚಿತ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ

ಬಂಟ್ವಾಳ, ಡಿ. 30: ಪುರಸಭೆಯ ಎಡವಟ್ಟಿನಿಂದ ಮೂರು ದಿನಗಳ ಬದಲು ನಾಲ್ಕು ದಿನಗಳ ಕಾಲ ನಗರವಾಸಿಗಳು ನೀರಿಗಾಗಿ ಪರದಾಡಬೇಕಾದ ಸ್ಥಿತಿ ಉಂಟಾಗಿತ್ತು. ಪುರಸಭೆ ವ್ಯಾಪ್ತಿಯ ಎರಡನೆ ಹಂತದ ಬೃಹತ್ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಅಳವಡಿಕೆಯ ಕಾಮಗಾರಿಯ ಹಿನ್ನೆಲೆಯಲ್ಲಿ ಡಿ. 27ರಿಂದ 29ರ ವರೆಗೆ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ವ್ಯತ್ಯಯ ಉಂಟಾಗಲಿದೆ ಎಂದು ಪುರಸಭೆ ಹಾಗೂ ಕೆ.ಯು.ಡಬ್ಲ್ಯೂಸಿ ಇಲಾಖೆ ಜಂಟಿ ಪ್ರಕಟಣೆ ನೀಡಿತ್ತು.
ಇಲಾಖೆಯ ಪ್ರಕಟಣೆಯಂತೆ ನೀರು ಪೂರೈಕೆಯ ವ್ಯತ್ಯಯ ಗುರುವಾರಕ್ಕೆ ಮುಗಿದಿದೆ. ಶುಕ್ರವಾರದಂದು ಪುರವಾಸಿಗಳಿಗೆ ಬೆಳಗಿನ ಜಾವ ನೀರು ಪೂರೈಕೆಯಾಗಬೇಕಿತ್ತು. ಆದರೆ ಪೈಪ್ ಅಳವಡಿಕೆಯ ಕಾಮಗಾರಿಯ ಸಂದರ್ಭದಲ್ಲಾದ ಅನಾನುಕೂಲತೆಯಿಂದ ಡಿ. 30ರಂದು ನಲ್ಲಿಯಲ್ಲಿ ಹರಿಯಬೇಕಾಗಿದ್ದ ನೀರು ಪೂರೈಕೆಯಾಗಿರಲಿಲ್ಲ. ಇದರಿಂದಾಗಿ ಪುರವಾಸಿಗಳು ನೀರಿಗಾಗಿ ಪರದಾಡಬೇಕಾದ ಸ್ಥಿತಿ ಉಂಟಾಗಿತ್ತು. ಮೂರು ದಿನಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಬಗ್ಗೆ ಮಾಹಿತಿ ನೀಡಿದ್ದರಿಂದ ಅಷ್ಟು ದಿನಗಳ ವರೆಗೆ ಪುರವಾಸಿಗಳು ನೀರು ಸಂಗ್ರಹಿಸಿದ್ದರೆ ಕೆಲವರು ಪಕ್ಕದ ಮನೆ ಆಶ್ರಯಿಸಿದ್ದರು.
ಪುರವಾಸಿಗಳಿಂದ ತರಾಟೆ:
ಶುಕ್ರವಾರವೂ ನೀರು ಪೂರೈಕೆಯಾಗದೇ ಇರುವುದರಿಂದ ಸಹಜವಾಗಿಯೇ ಆಕ್ರೋಶಿತರಾದ ಪುರವಾಸಿಗಳು ಮುಖ್ಯಾಧಿಕಾರಿ ಸೇರಿದಂತೆ ಕೆಯುಡಬ್ಲ್ಯೂಸಿ ಎಂಜಿನಿಯರ್‌ರವರಿಗೆ ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿಯವರು ತಮ್ಮಿಂದಾದ ಪ್ರಮಾದವನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ನೀರು ವ್ಯತ್ಯಯ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತ ರೇಣುಕಾಪ್ರಸಾದ್‌ರವರ ಉಪಸ್ಥಿತಿಯಲ್ಲಿ ಬಂಟ್ವಾಳ ಐಬಿಯಲ್ಲಿ ಶುಕ್ರವಾರ ಅಧಿಕಾರಿಗಳ ದಿಢೀರ್ ಸಭೆಯು ನಡೆಯಿತು.
ಈ ಸಭೆಯಲ್ಲಿ ಯೋಜನಾ ನಿರ್ದೇಶಕ ಪ್ರಸನ್ನ, ಮುಖ್ಯಾಧಿಕಾರಿ ಸುಧಾಕರ್, ಕೆಯುಡಬ್ಲ್ಯೂಸಿ ಎಂಜಿನಿಯರ್ ಶೋಭಾಲಕ್ಷ್ಮೀ, ಪುರಸಭಾ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಸದಸ್ಯ ಜಗದೀಶ್ ಕುಂದರ್ ಉಪಸ್ಥಿತರಿದ್ದರು. ಈ ಸಭೆಯ ಮಾಹಿತಿ ತಿಳಿದ ಸದಸ್ಯ ಗೋವಿಂದ ಪ್ರಭು ಐಬಿಗೆ ದೌಡಾಯಿಸಿ ಪುರಸಭೆಯು ನೀರು ಪೂರೈಕೆಯಲ್ಲಿ ಮಾಡಿಕೊಂಡಿರುವ ಎಡವಟ್ಟಿಗೆ ಆಕ್ರೋಶ ವ್ಯಕ್ತಪಡಿಸಿ ಮುಖ್ಯಾಧಿಕಾರಿಯವರನ್ನು ನೇರ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳ ಪರಿಶೀಲನೆ:
ಸಭೆ ಮುಗಿಯುತ್ತಿದ್ದಂತೆ ಅಧಿಕಾರಿಗಳ ದಂಡು ಕಾಮಗಾರಿ ನಡೆಯುತ್ತಿದ್ದ ಜಕ್ರಿಬೆಟ್ಟು ನೀರು ರೇಚಕ ಸ್ಥಾವರದ ಬಳಿ ದೌಡಾಯಿಸಿದ್ದಾರೆ. ಅಲ್ಲಿನ ವಸ್ತು ಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಸಂಜೆಯ ವೇಳೆ ನೀರು ಪೂರೈಸುವ ಬಗ್ಗೆ ಮುಖ್ಯಾಧಿಕಾರಿ ಸುಧಾಕರ್ ಹಾಗೂ ಅಧ್ಯಕ್ಷ ರಾಮಕೃಷ್ಣ ಆಳ್ವ ಸುದ್ದಿಗಾರರಿಗೆ ಖಾತ್ರಿಪಡಿಸಿದರು. ಈ ಸಂದರ್ಭದಲ್ಲೂ ಸೂಕ್ತ ಮುಂಜಾಗೃತೆ ವಹಿಸದೆ ಆಗಿರುವ ಪ್ರಮಾದದ ಬಗ್ಗೆಯೂ ಮುಖ್ಯಾಧಿಕಾರಿಯವರು ವಿಷಾದ ವ್ಯಕ್ತಪಡಿಸಿದರು.
ಶೋಭಾಲಕ್ಷ್ಮೀಯವರ ಶ್ರಮ:
ಕೆಯುಡಬ್ಲ್ಯೂಸಿ ಎಂಜಿನಿಯರ್ ಶೋಭಾಲಕ್ಷ್ಮೀ ಪೈಪ್‌ಲೈನ್ ಅಳವಡಿಕೆಯ ಸ್ಥಳದಲ್ಲಿ ನಿರಂತರ ಮೂರು ದಿನಗಳ ಕಾಲವೂ ಸ್ಥಳದಲ್ಲೇ ಉಪಸ್ಥಿತರಿದ್ದು , ಪೈಪ್ ಅಳವಡಿಕೆಗೆ ಸೂಕ್ತ ಮಾರ್ಗದರ್ಶನ ನೀಡಿದ್ದಲ್ಲದೆ ಅವರ ನಿರಂತರ ಶ್ರಮದ ಫಲವಾಗಿ ಶುಕ್ರವಾರ ಸಂಜೆ ಪುರವಾಸಿಗಳಿಗೆ ನೀರು ಲಭ್ಯವಾಗಿದೆ. ಈ ಸಂದರ್ಭದಲ್ಲಿ ಸದಸ್ಯ ಗೋವಿಂದಪ್ರಭು ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ನಿರ್ದೇಶನ ನೀಡಿದ್ದರು.
ಜಕ್ರಿಬೆಟ್ಟಿನಲ್ಲಿರುವ ರೇಚಕ ಸ್ಥಾವರದಿಂದ ಪೂರೈಕೆಯಾಗುವ ಪೈಪ್‌ಲೈನ್‌ನಲ್ಲಿ ಸೋರಿಕೆಯ ಪರಿಣಾಮ ಎರಡನೆ ಹಂತದ ಕುಡಿಯುವ ನೀರಿನ ಯೋಜನೆಯ ಹೊಸ ಪೈಪ್‌ಲೈನ್ ಅಳವಡಿಕೆಯ ಸಂದರ್ಭದಲ್ಲಿ ಸಮಸ್ಯೆ ಉಂಟಾಗಿ ಪುರವಾಸಿಗಳಿಗೆ ಇಲಾಖೆ ನೀಡಿದ ಗಡುವಿನ ದಿನದಂದು ನೀರು ಪೂರೈಕೆ ಸಾಧ್ಯವಾಗಿಲ್ಲ. ಇದಕ್ಕಾಗಿ ವಿಷಾದವಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಸುದ್ದಿಗಾರರಿಗೆ ಶೋಭಾಲಕ್ಷ್ಮೀಯವರು ತಿಳಿಸಿದರು.
ಶುಕ್ರವಾರ ಸಂಜೆಯ ವೇಳೆಗೆ ನಗರವಾಸಿಗಳಿಗೆ ನೀರು ಪೂರೈಸುವ ವಾಗ್ದಾನ ನೀಡಿದಂತೆ ನೀರು ಪೂರೈಕೆಯಾಗಿದೆ. ಇಂಜಿನಿಯರ್ ಶೋಭಾಲಕ್ಷ್ಮೀಯವರ ಕಾರ್ಯ ವ್ಯಾಪಕ ಶ್ಲಾಘನೆಗೆ ಒಳಗಾಗಿದೆ.







