ಬೋರ್‌ವೆಲ್ ಇಲ್ಲದೆ ಬೆಳೆ ಉಳಿಯದು: ಗುರುಮೂರ್ತಿ
ಬೋರ್‌ವೆಲ್ ನಿರ್ಬಂಧ, ಮರಳಿನ ಸಮಸ್ಯೆ, ಬರಗಾಲ ಕುರಿತು ಜಿಲ್ಲಾ ಅಭಿವೃದ್ಧಿ ಸಮನ್ವಯ ಸಭೆ

ಶಿವಮೊಗ್ಗ, ಡಿ. 30: ಜಿಲ್ಲೆಯಲ್ಲಿ ಪ್ರಸಕ್ತ ಕೊಳವೆಬಾವಿಗಳನ್ನು ಕೊರೆಯುವ ಹಾಗೂ ಮರಳಿನ ಸಮಸ್ಯೆಯನ್ನು ನಿವಾರಿಸುವ ಬಗ್ಗೆ ಇಂದು ಜರಗಿದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಲೋಕಸಭಾ ಸದಸ್ಯ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಸಮಿತಿಯ ಸದಸ್ಯ ಗುರುಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ ಈ ಬಾರಿ ಬರಗಾಲ ಎದುರಾಗಿರುವುದರಿಂದ ಬೆಳೆಗಳಿಗೆ ನೀರಿನ ಸಮಸ್ಯೆ ಎದುರಾಗಿದೆ. ಅಡಿಕೆ ತೋಟಗಳು ಒಣಗುವ ಹಂತಕ್ಕೆ ಬಂದಿವೆ. ಆದರೆ, ಹೊಸ ಬೋರ್‌ವೆಲ್ ಕೊರೆಯಲು ಅನುಮತಿ ಸಿಗದೆ ರೈತರು ಬೆಳೆ ಕಾಪಾಡಿಕೊಳ್ಳಲು ಹೆಣಗಾಡುತ್ತಿದ್ದಾರೆ ಎಂದರು.
ಸುಮಾರು 1 ತಿಂಗಳಿಂದ ಬೋರ್‌ವೆಲ್ ತೆಗೆಯುತ್ತಿರುವವರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ. ಬೋರ್‌ವೆಲ್ ತೆಗೆಯದಿದ್ದರೆ ಬೆಳೆ ಉಳಿಯುವುದಿಲ್ಲ. ರೈತ ಆತ್ಮಹತ್ಯೆಯ ಹಾದಿ ಹಿಡಿಯುತ್ತಾನೆ. ಈ ಹಿನ್ನೆಲೆಯಲ್ಲಿ ಬೋರ್‌ವೆಲ್ ತೆಗೆಸಲು ಅನುಮತಿ ನೀಡಬೇಕೆಂದರು.
ಈ ಸಂದಭರ್ದಲ್ಲಿ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಮಾತನಾಡಿ, ಇತ್ತೀಚೆಗೆ ಬರಗಾಲ ಸಮೀಕ್ಷೆಗೆ ಜಿಲ್ಲೆಗೆ ಆಗಮಿಸಿದ್ದ ರಾಜ್ಯ ಸಚಿವ ಸಂಪುಟ ಸಮಿತಿ ಸದಸ್ಯರು ಅವಶ್ಯವಿದ್ದಲ್ಲಿ ಬೋರ್‌ವೆಲ್ ಕೊರಿಯಲು ಅನುಮತಿ ಕೊಡುವಂತೆ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅಗತ್ಯವಿದ್ದಲ್ಲಿ ಪರವಾನಿಗೆ ನೀಡಲಾಗುವುದು ಎಂದರು.
ಈ ವಿಚಾರವಾಗಿ ಸಾಗರ ತಾಪಂ್ತ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಮಲೆನಾಡಿನಲ್ಲಿ ಬೋರ್‌ವೆಲ್ ಕೊರೆಯಲು ನಿಯಮ ಸಡಿಲಿಸ ಬೇಕೆಂದು ಮನವಿ ಮಾಡಿದರು. ಶಿಕಾರಿಪುರಕ್ಕೆ ಹೊನ್ನಾಳಿಯಿಂದ ಮರಳು ಪೂರೈಸಲು ದಾವಣಗೆರೆ ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಅನುಮತಿ ಕೊಡಿಸಬೇಕೆಂದು ಈ ಸಂದರ್ಭದಲ್ಲಿ ಶಾಸಕ ಬಿ.ವೈ. ರಾಘವೇಂದ್ರ ಹಾಗೂ ಸದಸ್ಯ ಗುರುಮೂರ್ತಿ, ಯಡಿಯೂರಪ್ಪ ಅವರನ್ನು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಡಾ. ಲೋಕೇಶ್, ಮರಳಿನ ಸಮಸ್ಯೆ ನಿವಾರಿಸಲು ಜಿಲ್ಲೆಯಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ. ಒಂದು ವಾರದಲ್ಲಿ ಹೊಸ ನೀತಿ ಪ್ರಕಾರ ಮರಳು ವಿತರಿಸಲಾಗುವುದು ಎಂದರು.
ಶಿವಮೊಗ್ಗ ಉಪವಿಭಾಗಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಮಾಹಿತಿ ನೀಡಿ, ಕಸ್ತೂರಿ ರಂಗನ್ ವರದಿ ಹಿನ್ನೆಲೆಯಲ್ಲಿ ಮಲೆನಾಡಿನ ಕೆಲವು ಪ್ರದೇಶಗಳಲ್ಲಿ ಮರಳು ತೆಗೆಯದಂತೆ ಸರಕಾರದ ನಿರ್ದೇಶನವಿದೆ. ಇದರಿಂದ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮರಳು ಸಮಸ್ಯೆ ಎದುರಾಗಿದೆ. ಹೊಳೆಕೊಪ್ಪ ಮತ್ತು ಮಹಿಷಿಯಲ್ಲಿ ಅಪಾರವಾದ ಮರಳಿದೆ. ಆದರೆ ಇಲ್ಲಿ ಕಸ್ತೂರಿ ರಂಗನ್ ವರದಿಯಿಂದಾಗಿ ತೆಗೆಯಲಾಗುತ್ತಿಲ್ಲ ಎಂದರು.
ಇದಕ್ಕೆ ಆಕ್ಷೇಪಿಸಿದ ಗುರುಮೂರ್ತಿ, ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಬಂದಿಲ್ಲ. ಇನ್ನೂ ಸರಕಾರದ ಪರಿಶೀಲನೆಯಲ್ಲಿದೆ. ಹಾಗಿರುವಾಗ ಆ ಹೆಸರಿನಲ್ಲಿ ಮರಳು ತೆಗೆಯುವುದಕ್ಕೆ ಅಡ್ಡಿ ಪಡಿಸುವುದು ಸರಿಯಲ್ಲ ಎಂದರು.
ಇದಕ್ಕೆ ಕೃಷ್ಣಮೂರ್ತಿ ಉತ್ತರಿಸಿ ಸರಕಾರದ ನಿರ್ದೇಶನದಂತೆ ಮರಳು ತೆಗೆಯಲಾಗುತ್ತಿದೆ. ಈ ಎರಡು ಪ್ರದೇಶದಿಂದ ಮರಳು ತೆಗೆಯಲು ಅನುಮತಿ ಸಿಕ್ಕರೆ ಶಿವಮೊಗ್ಗ ಜಿಲ್ಲೆಗೆ ಸುಮಾರು 35 ಸಾವಿರ ಲೋಡ್ ಮರಳು ತೊರೆಯುತ್ತದೆ ಎಂದರು.
ಸರಕಾರಕ್ಕೆ ಈ ಬಗ್ಗೆ ಪತ್ರ ಬರೆದು ಇಲ್ಲಿನ ಮರಳಿನ ಸಮಸ್ಯೆಯನ್ನು ವಿವರಿಸಿ, ಹೊಳೆಕೊಪ್ಪ ಹಾಗೂ ಮಹಿಷಿಯಲ್ಲೂ ಮರಳು ಕೋರೆಗೆ ಅನುಮತಿ ಕೊಡುವಂತೆ ಒತ್ತಾಯಿಸಲು ನಿರ್ಣಯಿಸಲಾಯಿತು. ಸಭೆಯಲ್ಲಿ ಜಿಪಂ ಸಿಇಒ ಕೆ. ರಾಕೇಶ್‌ಕುಮಾರ್, ಜಿಪಂ ಅಧ್ಯಕ್ಷ ಜ್ಯೋತಿ ಎಸ್. ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠ ಅಭಿನವ್ ಖರೆ ಉಪಸ್ಥಿತರಿದ್ದರು.







