ಪತ್ನಿಯ ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪಿಗೆ ಜೈಲು
ಚಿಕ್ಕಮಗಳೂರು, ಡಿ.30: ವರದಕ್ಷಿಣೆಗಾಗಿ ಕಿರುಕುಳ ನೀಡಿ ಚಿತ್ರ ಹಿಂಸೆ ಕೊಟ್ಟು ಹೆಂಡತಿಯನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ 2ನೆ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ನೀಡಿದೆ.
ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಎಸ್ಗಲ್ ಗ್ರಾಮದ ನಿವಾಸಿ ಆರೋಪಿ ರಾಜೇಂದ್ರನಿಗೆ 2012ರ ಡಿ.29ರಂದು ಕುಮಾರಗಿರಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎನ್‌ಎಂಡಿಸಿ ಕೈಮರ ವಾಸಿಯಾದ ದೊರೆ ಎಂಬವರು ವರದಕ್ಷಿಣೆ ಮತ್ತು ಬಂಗಾರದ ಆಭರಣಗಳನ್ನು ನೀಡಿ ತಮ್ಮ ಮಗಳಾದ ಸುಧಾಳನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ದರು.ಆದರೆ ಆರೋಪಿ ರಾಜೇಂದ್ರನು ಮೂರು ತಿಂಗಳವರೆಗೆ ಹೆಂಡತಿಯನ್ನು ಚೆನ್ನಾಗಿನೋಡಿಕೊಂಡಿದ್ದು,ನಂತರ ಹೆಚ್ಚಿನ ವರದಕ್ಷಿಣೆ ತರಬೇಕೆಂದು ಪೀಡಿಸುತ್ತಿದ್ದನು.
ಈ ಹಿನ್ನೆಲೆ ಮೃತಳ ತಂದೆ 70,000 ರೂ. ನೀಡಿದ್ದರೂ, ಅತೀ ಆಸೆಯಿಂದ ಪುನಃ ಆಕೆಗೆ ಮಾನಸಿಕವಾಗಿ,ದೈಹಿಕವಾಗಿ ಕಿರುಕುಳ ನೀಡುತ್ತಿದ್ದರಿಂದ ಸುಧಾ ಬೇಸತ್ತು 2013ರ ಡಿ.12ರಂದು ಸೀರೆಯಿಂದ ನೇಣು ಹಾಕಿಕೊಂಡು ಗಂಡನ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಕುರಿತು ಮೂಡಿಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಲಂ 498ರ ಅನ್ವಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 2ನೆ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿ ರಾಜೇಂದ್ರನಿಗೆ ಕಲಂ 498ರ ಅಪರಾಧಕ್ಕೆ 1 ವರ್ಷ ಜೈಲು ಶಿಕ್ಷೆ ಹಾಗೂ ರೂ. 5,000 ದಂಡ, ಕಲಂ 304-ಬಿ 7 ವರ್ಷಗಳ ಜೈಲು ಶಿಕ್ಷೆ ವರದಕ್ಷಿಣೆ ಕಿರುಕುಳ ಕಾಯ್ದೆಯ ಕಲಂ 3ಕ್ಕೆ 5 ವರ್ಷಗಳ ಶಿಕ್ಷೆ ಹಾಗೂ 15,000 ರೂ. ದಂಡ, ಕಲಂ 4 ಮತ್ತು 6ಕ್ಕೆ ತಲಾ 6 ತಿಂಗಳು ಜೈಲು ಶಿಕ್ಷೆ 5,000 ರೂ. ದಂಡ ವಿಧಿಸಿ ತೀರ್ಪು ಹೊರಡಿಸಿದೆ.







