ಬ್ರಾವೊಗೆ ಗಂಭೀರ ಗಾಯ, ಶಸ್ತ್ರಚಿಕಿತ್ಸೆ ಸಂಭವ

ಮೆಲ್ಬೋರ್ನ್, ಡಿ.30: ವೆಸ್ಟ್‌ಇಂಡೀಸ್ ಆಲ್‌ರೌಂಡರ್ ಡ್ವೇಯ್ನ್ ಬ್ರಾವೊ ಸ್ನಾಯು ಸೆಳೆತದ ಕಾರಣ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯದ ಟ್ವೆಂಟಿ-20 ಕೂಟ ಬಿಗ್‌ಬಾಶ್ ಲೀಗ್‌ನ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ.
ಲೀಗ್‌ನಲ್ಲಿ ಮೆಲ್ಬೋರ್ನ್ ರೆನಗಡೆಸ್ ತಂಡವನ್ನು ಪ್ರತಿನಿಧಿಸುತ್ತಿರುವ ಬ್ರಾವೊ ಗುರುವಾರ ನಡೆದ ಸಿಡ್ನಿ ಥಂಡರ್ ವಿರುದ್ಧದ ಲೀಗ್ ಪಂದ್ಯದಲ್ಲಿ ಫೀಲ್ಡಿಂಗ್‌ನ ವೇಳೆ ಗಾಯಗೊಂಡಿದ್ದರು. ಸ್ಕಾನಿಂಗ್‌ನಲ್ಲಿ ಬ್ರಾವೊಗೆ ಗಂಭೀರ ಗಾಯವಾಗಿರುವುದು ಕಂಡು ಬಂದಿದೆ. ಗಾಯಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯ ಇರುವ ಕಾರಣ ಬ್ರಾವೊ ಕೆಲವು ಸಮಯ ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿಯುವಂತಾಗಿದೆ.
ಬ್ರಾವೊ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಮೈಕಲ್ ಕ್ಲಿಂಜರ್ ಬಾರಿಸಿದ ಚೆಂಡನ್ನು ತಡೆಯಲ ಡೈವ್ ಹೊಡೆದಾಗ ಸ್ನಾಯು ಸೆಳೆತ ಕಾಣಿಸಿಕೊಂಡಿತ್ತು. ‘‘ದುರದೃಷ್ಟವಶಾತ್ ನನ್ನ ಬಿಗ್ ಬಾಶ್ ಋತು ಗಾಯದೊಂದಿಗೆ ಕೊನೆಗೊಂಡಿರುವುದಕ್ಕೆ ತುಂಬಾ ಬೇಸರವಾಗುತ್ತಿದೆ. ನಾನು ಸರ್ಜರಿಗೆ ಒಳಗಾಗಲಿದ್ದು, ಫಿಟ್‌ನೆಸ್ ಪಡೆಯಲು ಪುನ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳುವೆ. ಮತ್ತೊಮ್ಮೆ ಉತ್ತಮ ಪಂದ್ಯ ಆಡುವೆ’’ ಎಂದು ಬ್ರಾವೊ ನುಡಿದರು.
ಬ್ರಾವೊ ನಾಲ್ಕನೆ ಬಾರಿ ಬಿಗ್‌ಬಾಶ್ ಟೂರ್ನಿಯಲ್ಲಿ ಆಡುತ್ತಿದ್ದು, ಈ ಹಿಂದೆ ಸಿಡ್ನಿ ಸಿಕ್ಸರ್ ತಂಡವನ್ನು ಪ್ರತಿನಿಧಿಸಿದ್ದರು. ಗುರುವಾರ ನಡೆದ ಪಂದ್ಯದಲ್ಲಿ 23 ರನ್ ಗಳಿಸಿದ್ದ ಬ್ರಾವೊ 14 ರನ್ ನೀಡಿ ವಿಕೆಟ್ ಪಡೆಯಲು ವಿಫಲರಾಗಿದ್ದರು. ಬಿಬಿಎಲ್ ಋತುವಿನ ಸಿಡ್ನಿ ವಿರುದ್ಧದ ಮೊದಲ ಪಂದ್ಯದಲ್ಲಿ 24 ರನ್ ಗಳಿಸಿ, 2 ವಿಕೆಟ್ ಕಬಳಿಸಿದ್ದರು.







