ಮೊದಲ ಟೆಸ್ಟ್: ದಕ್ಷಿಣ ಆಫ್ರಿಕಕ್ಕೆ ಶರಣಾದ ಶ್ರೀಲಂಕಾ

ಪೋರ್ಟ್ ಎಲಿಝಬೆತ್, ಡಿ.30: ದಕ್ಷಿಣ ಆಫ್ರಿಕ ಬೌಲರ್‌ಗಳ ದಾಳಿಗೆ ಸಿಲುಕಿದ ಶ್ರೀಲಂಕಾ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ 206 ರನ್‌ಗಳ ಅಂತರದಿಂದ ಹೀನಾಯವಾಗಿ ಸೋತಿದೆ.
ಇಲ್ಲಿನ ಸೈಂಟ್ ಜಾರ್ಜ್ ಪಾರ್ಕ್‌ನಲ್ಲಿ ಶುಕ್ರವಾರ ನಡೆದ ಐದನೆ ಹಾಗೂ ಕೊನೆಯ ದಿನದಾಟದಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 240 ರನ್‌ನಿಂದ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ ತಂಡ ನಿನ್ನೆಯ ಮೊತ್ತಕ್ಕೆ ಕೇವಲ 41 ರನ್ ಸೇರಿಸಿ 281 ರನ್‌ಗೆ ಆಲೌಟಾಯಿತು.
ಕೇವಲ 70 ನಿಮಿಷಗಳ ಆಟದಲ್ಲಿ 13.3 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕ ತಂಡ ಶ್ರೀಲಂಕಾದ ಕೊನೆಯ 5 ವಿಕೆಟ್‌ಗಳನ್ನು ಉರುಳಿಸಿತು. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಶ್ರೀಲಂಕಾದ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ 59 ರನ್ ಗಳಿಸಿದ್ದಾಗ ಅಬಾಟ್ ಬೀಸಿದ ಎಲ್‌ಬಿಡಬ್ಲು ಬಲೆಗೆ ಬಿದ್ದು ನಿರ್ಗಮಿಸಿದರು. ಮ್ಯಾಥ್ಯೂಸ್ ತಂಡದ ಪರ ಸರ್ವಾಧಿಕ ರನ್ ಬಾರಿಸಿದರು.
120 ಎಸೆತಗಳಲ್ಲಿ 59 ರನ್ ಗಳಿಸಿದ ಮ್ಯಾಥ್ಯೂಸ್ 7 ಬೌಂಡರಿ ಬಾರಿಸಿದರು. ನಿನ್ನೆಯ ಮೊತ್ತಕ್ಕೆ ಕೇವಲ 1 ರನ್ ಗಳಿಸಿದರು. ಮ್ಯಾಥ್ಯೂಸ್ ನಿರ್ಗಮನದ ಬಳಿಕ ಇನ್ನೊರ್ವ ಬ್ಯಾಟ್ಸ್‌ಮನ್ ಧನಂಜಯ್ ಡಿಸಿಲ್ವಾ(22) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಡಿಸಿಲ್ವಾ ಕೂಡ ಅಬಾಟ್‌ಗೆ ಎಲ್‌ಬಿಡಬ್ಲುಗೆ ಒಳಗಾದರು.
ಅಬಾಟ್‌ರಿಂದ ಎದುರಿಸಿದ ಮೊದಲ ಎಸೆತದಲ್ಲೇ ಮಧ್ಯಬೆರಳಿಗೆ ಗಾಯ ಮಾಡಿಕೊಂಡ ರಂಗನ ಹೆರಾತ್ ಕೇವಲ 3 ರನ್ ಗಳಿಸಿ ಫಿಲ್ಯಾಂಡರ್‌ಗೆ ರಿಟರ್ನ್ ಕ್ಯಾಚ್ ನೀಡಿದರು.
ಸುರಂಗ ಲಕ್ಮಲ್ 20 ಎಸೆತಗಳಲ್ಲಿ ಅಜೇಯ 19 ರನ್ ಗಳಿಸಿದರು. ದುಶ್ಮಂತ್ ಚಾಮೀರ ಅವರು ರಬಾಡಗೆ ವಿಕೆಟ್ ಒಪ್ಪಿಸಿದರು. ನುವಾನ್ ಪ್ರದೀಪ್ ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್‌ಗೆ ಔಟಾಗುವುದರೊಂದಿಗೆ ಶ್ರೀಲಂಕಾದ ಇನಿಂಗ್ಸ್ ಕೊನೆಗೊಂಡಿತು.
ರಬಾಡ (77 ರನ್‌ಗೆ 3)ಹಾಗೂ ಮಹಾರಾಜ್ (86 ರನ್‌ಗೆ 3) ತಲಾ 3 ವಿಕೆಟ್ ಪಡೆದರು. ಕೊನೆಯ ದಿನದಾಟದಲ್ಲಿ 5 ಓವರ್‌ಗಳಲ್ಲಿ 7 ರನ್‌ಗೆ 2 ವಿಕೆಟ್ ಕಬಳಿಸಿದ ಅಬಾಟ್ 38 ರನ್‌ಗೆ 2 ವಿಕೆಟ್ ಪೂರೈಸಿದರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕ ಮೊದಲ ಇನಿಂಗ್ಸ್: 286
ಶ್ರೀಲಂಕಾ ಪ್ರಥಮ ಇನಿಂಗ್ಸ್: 205
ದಕ್ಷಿಣ ಆಫ್ರಿಕ ಎರಡನೆ ಇನಿಂಗ್ಸ್: 406/6 ಡಿಕ್ಲೇರ್
ಶ್ರೀಲಂಕಾ ದ್ವಿತೀಯ ಇನಿಂಗ್ಸ್: 96.3 ಓವರ್‌ಗಳಲ್ಲಿ 281 ರನ್‌ಗೆ ಆಲೌಟ್
(ಮ್ಯಾಥ್ಯೂಸ್ 59, ಮೆಂಡಿಸ್ 58, ಜೆಕೆ ಸಿಲ್ವಾ 48, ರಬಾಡ 3-77, ಮಹಾರಾಜ್ 3-86, ಅಬಾಟ್ 2-38)
ಪಂದ್ಯಶ್ರೇಷ್ಠ: ಸ್ಟೀಫನ್ ಕುಕ್(ದ.ಆಫ್ರಿಕ)







