ದ್ವಿತೀಯ ಟೆಸ್ಟ್: ಆಸ್ಟ್ರೇಲಿಯಕ್ಕೆ ಭರ್ಜರಿ ಜಯ
ಸ್ಟಾರ್ಕ್ ಆಲ್‌ರೌಂಡ್ ಆಟ, ಸರಣಿ ಸೋತ ಪಾಕ್

ಮೆಲ್ಬೋರ್ನ್, ಡಿ.30: ಮಿಚೆಲ್ ಸ್ಟಾರ್ಕ್ ಆಲ್‌ರೌಂಡ್ ಆಟದ ನೆರವಿನಿಂದ ಆಸ್ಟ್ರೇಲಿಯ ತಂಡ ಪಾಕಿಸ್ತಾನ ವಿರುದ್ಧದ ಎರಡನೆ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 18 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಗೆಲುವಿನ ಮೂಲಕ ಆತಿಥೇಯ ಆಸೀಸ್ ತಂಡ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಐದನೆ ಹಾಗೂ ಅಂತಿಮ ದಿನವಾದ ಶುಕ್ರವಾರ ನಾಯಕ ಸ್ಟೀವ್ ಸ್ಮಿತ್ ಬಾರಿಸಿದ ಅಜೇಯ 165 ರನ್ ಸಹಾಯದಿಂದ ಭೋಜನ ವಿರಾಮಕ್ಕೆ ಮೊದಲು ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್ ನಷ್ಟದಲ್ಲಿ 624 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು.ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 181 ರನ್ ಮುನ್ನಡೆ ಪಡೆಯಿತು.
ಆಸ್ಟ್ರೇಲಿಯ ಎಂಜಿಸಿ ಮೈದಾನದಲ್ಲಿ ಗರಿಷ್ಠ ಮೊತ್ತ(624/8) ದಾಖಲಿಸಿದ ಸಾಧನೆ ಮಾಡಿತು. ಈ ಮೂಲಕ 1936-37ರಲ್ಲಿ ಆ್ಯಶಸ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಗಳಿಸಿದ್ದ ತನ್ನದೇ 604 ರನ್ ದಾಖಲೆಯನ್ನು ಮುರಿಯಿತು.
ಎರಡನೆ ಇನಿಂಗ್ಸ್ ಆರಂಭಿಸಿದ ಪಾಕ್ ತಂಡ 53.2 ಓವರ್‌ಗಳಲ್ಲಿ ಕೇವಲ 163 ರನ್‌ಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ವೇಗದ ಬೌಲರ್ ಸ್ಟಾರ್ಕ್(4-36) ಅತ್ಯುತ್ತಮ ಬೌಲಿಂಗ್‌ನಿಂದ ಗಮನ ಸೆಳೆದರು. ಸ್ಪಿನ್ನರ್ ಲಿಯೊನ್(3-33)ಹಾಗೂ ವೇಗದ ಬೌಲರ್ ಹೇಝಲ್‌ವುಡ್(2-39) ಸ್ಟಾರ್ಕ್‌ಗೆ ಉತ್ತಮ ಸಾಥ್ ನೀಡಿದರು.
ಪಾಕಿಸ್ತಾನ ತಂಡ ಬ್ರಿಸ್ಬೇನ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯವನ್ನು 39 ರನ್‌ಗಳಿಂದ ಸೋತಿತ್ತು. ಮೂರನೆ ಹಾಗೂ ಅಂತಿಮ ಟೆಸ್ಟ್ ಪಂದ್ಯ ಜ.3 ರಿಂದ ಸಿಡ್ನಿಯಲ್ಲಿ ಆರಂಭವಾಗಲಿದೆ.
ಅಕ್ಟೋಬರ್‌ನ ಬಳಿಕ ಸತತ 5 ಟೆಸ್ಟ್ ಪಂದ್ಯಗಳಲ್ಲಿ ಸೋತಿರುವ ಪಾಕ್ ತಂಡ ಆಸ್ಟ್ರೇಲಿಯ ನೆಲದಲ್ಲಿ 52 ವರ್ಷಗಳ ಬಳಿಕ ಚೊಚ್ಚಲ ಟೆಸ್ಟ್ ಸರಣಿ ಜಯಿಸುವ ಕನಸು ಕೈಗೂಡಲಿಲ್ಲ.
ಎರಡನೆ ಇನಿಂಗ್ಸ್ ಆರಂಭಿಸಿದ ಪಾಕ್ 6 ರನ್‌ಗೆ 2 ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ 3ನೆ ವಿಕೆಟ್‌ಗೆ 57 ರನ್ ಸೇರಿಸಿದ ಮೊದಲ ಇನಿಂಗ್ಸ್‌ನಲ್ಲಿ ಅಜೇಯ ದ್ವಿಶತಕ ಬಾರಿಸಿದ್ದ ಪಾಕ್ ಆರಂಭಿಕ ಆಟಗಾರ ಅಝರ್ ಅಲಿ ಹಾಗೂ ಯೂನಿಸ್ ಖಾನ್(24) ತಂಡವನ್ನು ಆಧರಿಸಲು ಯತ್ನಿಸಿದರು. ಯೂನಿಸ್ ಖಾನ್ 24 ರನ್‌ಗೆ ಔಟಾದರು.
ಆಗ ಕ್ರೀಸ್‌ಗೆ ಇಳಿದ ನಾಯಕ ಮಿಸ್ಬಾವುಲ್‌ಹಕ್ ಖಾತೆ ತೆರೆಯದೇ ಪೆವಿಲಿಯನ್‌ಗೆ ಸೇರಿದರು. ಅಸದ್ ಶಫೀಕ್ 16 ರನ್ ಗಳಿಸಿದರು. ಪಾಕ್ ತಂಡ 89 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಝರ್ ಅಲಿ ಅವರು 43 ರನ್ ಗಳಿಸಿ ಔಟಾದರು.
ವಿಕೆಟ್‌ಕೀಪರ್ ಸರ್ಫರಾಝ್ ಅಹ್ಮದ್(43) ಹಾಗೂ ಮುಹಮ್ಮದ್ ಆಮಿರ್(11)7ನೆ ವಿಕೆಟ್‌ಗೆ 42 ರನ್ ಜೊತೆಯಾಟ ನಡೆಸಿದರು. ಆದರೆ, ಈ ಇಬ್ಬರು ಬೇರ್ಪಟ್ಟ ಬಳಿಕ ಪಾಕ್ ಕುಸಿತದ ಹಾದಿ ಹಿಡಿದು 163 ರನ್‌ಗೆ ತನ್ನ ಹೋರಾಟ ಕೊನೆಗೊಳಿಸಿತು.
ಇದಕ್ಕೂ ಮೊದಲು 6 ವಿಕೆಟ್ ನಷ್ಟಕ್ಕೆ 465 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಆಸೀಸ್‌ನ ಪರ 7ನೆ ವಿಕೆಟ್‌ಗೆ 154 ರನ್ ಜೊತೆಯಾಟ ನಡೆಸಿದ ಸ್ಮಿತ್ ಹಾಗೂ ಸ್ಟಾರ್ಕ್ ಪಾಕಿಸ್ತಾನದ ಬೌಲರ್‌ಗಳನ್ನು ಹಿಗ್ಗಾಮುಗ್ಗ ದಂಡಿಸಿದರು.
ಸ್ಮಿತ್ 246 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಔಟಾಗದೆ 165 ರನ್ ಗಳಿಸಿದರು. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲಿ ಮಿಂಚಿದ ಸ್ಟಾರ್ಕ್ 91 ಎಸೆತಗಳಲ್ಲಿ 3 ಬೌಂಡರಿ, 7 ಸಿಕ್ಸರ್‌ಗಳ ಸಹಿತ 84 ರನ್ ಬಾರಿಸಿ ಗಮನಸೆಳೆದರು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ ಪ್ರಥಮ ಇನಿಂಗ್ಸ್: 443
ಆಸ್ಟ್ರೇಲಿಯ ಪ್ರಥಮ ಇನಿಂಗ್ಸ್: 654/8 ಡಿಕ್ಲೇರ್
(ಸ್ಮಿತ್ ಅಜೇಯ 165, ವಾರ್ನರ್ 144, ಖ್ವಾಜಾ 97, ಸ್ಟಾರ್ಕ್ 84, ಸೊಹೈಲ್ ಖಾನ್ 3-131, ಯಾಸಿರ್ ಷಾ 3-207, ರಿಯಾಝ್ 2-147)
ಪಾಕಿಸ್ತಾನ ದ್ವಿತೀಯ ಇನಿಂಗ್ಸ್: 163 ರನ್‌ಗೆ ಆಲೌಟ್
(ಅಝರ್ ಅಲಿ 43, ಸರ್ಫರಾಝ್ ಅಹ್ಮದ್ 43, ಸ್ಟಾರ್ಕ್ 4-36, ಲಿಯೊನ್ 3-33, ಹೇಝಲ್‌ವುಡ್ 2-39)
ಪಂದ್ಯಶ್ರೇಷ್ಠ: ಸ್ಟೀವನ್ ಸ್ಮಿತ್.







