ನದಿ ಮೇಲಿನ ಅತಿಕ್ರಮಣ ನಿಲ್ಲದಿದ್ದರೆ ಮೀನುಗಾರಿಕೆ ಇಲ್ಲವಾದೀತು: ಯಲ್ಲಪ್ಪರೆಡ್ಡಿ ಎಚ್ಚರಿಕೆ
ವಿಚಾರ ಸಂಕಿರಣ

ಉಡುಪಿ, ಡಿ.30: ಕೋಟ್ಯಂತರ ಜೀವಿಗಳಿಗೆ ಜೀವ ಚೈತನ್ಯ ನೀಡುವ ನದಿಗಳ ಮೇಲೆ ಸ್ವಾರ್ಥಕ್ಕಾಗಿ ಅಣೆಕಟ್ಟು ನಿರ್ಮಾಣ, ನದಿ ತಿರುವು ಮೊದಲಾದ ಪ್ರಾಕೃತಿಕ ನಿಯಮಗಳಿಗೆ ವಿರುದ್ಧವಾದ ಅತ್ಯಾಚಾರ ಮುಂದುವರಿದಲ್ಲಿ ಸಮಗ್ರ ಮೀನುಗಾರಿಕೆ ಮೊದಲಾದ ನದಿ ಸಮುದ್ರಗಳನ್ನು ಅವಲಂಬಿಸಿರುವ ದೇಶದ ಆರ್ಥಿಕತೆಯ ಮೂಲಕ್ಕೇ ಗಂಭೀರ ಅಪಾಯಶತಃಸಿದ್ಧ ಎಂದು ಖ್ಯಾತ ಪರಿಸರವಾದಿ ಎನ್. ಯಲ್ಲಪ್ಪ ರೆಡ್ಡಿ ಎಚ್ಚರಿಸಿದ್ದಾರೆ.
ಪೇಜಾವರ ಮಠದ ವತಿಯಿಂದ ರಾಜಾಂಗಣ ದಲ್ಲಿ ನಡೆಯುತ್ತಿರುವ ಬೆಂಗಳೂರಿನ ಪೂರ್ಣಪ್ರತಿ ಶಾಲೆಯ ವರ್ಧಂತಿ ಅಂಗವಾಗಿ ‘ಯಲ್ಲಪ್ಪರೆಡ್ಡಿ ಬದುಕು ಅನುಭವಗಳ ಹಿನ್ನೆಲೆಯಲ್ಲಿ ಪ್ರಕೃತಿ ಪಾಠ’ ಎಂಬ ವಿಷಯದ ಮೇಲೆ ನಡೆದ ವಿಚಾರ ಸಂಕಿರಣದಲ್ಲಿ ಅವರು ಉಪನ್ಯಾಸ ನೀಡಿದರು.
ನದಿಗಳ ಸಹಜ ಹರಿಯುವಿಕೆಗೆ ನಾವು ತಡೆಗಳನ್ನು ಒಡ್ಡುತ್ತಾ ಹೋದರೆ ಮೀನುಗಾರಿಕೆಯನ್ನೇ ನಂಬಿರುವ ದೇಶದ ಕರಾವಳಿ ಭಾಗದ ಜನರ ಬದುಕು ದುರ್ಬರವಾಗಲಿದೆ ಎಂದವರು ನುಡಿದರು. ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅನುಗ್ರಹ ಸಂದೇಶ ನೀಡಿದರು.ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥರು ಉಪಸ್ಥಿತರಿದ್ದರು. ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ವಿದ್ವಾನ್ ಸತ್ಯನಾರಾಯಣ ಆಚಾರ್ಯ, ಹಿರಿಯ ಪತ್ರಕರ್ತ ನಾಗೇಶ ಹೆಗಡೆ ವೇದಿಕೆಯಲ್ಲಿದ್ದರು. ಶಾಲೆಯ ಪ್ರಾಂಶುಪಾಲೆ ಶಶಿರೇಖಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.







