ಕೊರಗರಿಗಾಗಿ ಇಂದು ಆರೋಗ್ಯ ಶಿಬಿರ
ಕಾಲ್ತೋಡು, ಡಿ.30: ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಡಿ.31ರಂದು ಕಾಲ್ತೋಡು ಗ್ರಾಪಂ ವ್ಯಾಪ್ತಿಯ ಮೂರೂರಿನಲ್ಲಿ ಗ್ರಾಮ ವಾಸ್ತವ್ಯ ಮಾಡುವ ಹಿನ್ನೆಲೆಯಲ್ಲಿ ಬೆಳಗ್ಗೆ ಗ್ರಾಮದಲ್ಲಿ ಕೊರಗರು ಸೇರಿದಂತೆ ಪರಿಶಿಷ್ಟ ಪಂಗಡದವರಿಗೆ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಐಟಿಡಿಪಿ ಅಧಿಕಾರಿ ಹರೀಶ್ ಗಾಂವ್ಕರ್ ತಿಳಿಸಿದ್ದಾರೆ.
ಸಚಿವರ ಕಾರ್ಯಕ್ರಮದ ಹಿನ್ನೆಲೆ ಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು ಸಚಿವರು ಕಳೆದ ವರ್ಷ ದ.ಕ.ದ ಕೊರಗ ಕಾಲನಿಯಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದು, ಈ ಬಾರಿ ಉಡುಪಿ ಜಿಲ್ಲೆಯ ಮೂರೂರನ್ನು ಆಯ್ಕೆ ಮಾಡಿದ್ದಾರೆ ಎಂದರು.
ಜಿಲ್ಲೆಯಲ್ಲಿರುವ ಪರಿಶಿಷ್ಟ ಪಂಗಡ ಒಟ್ಟು ಸಂಖ್ಯೆ 52,897 ಆಗಿದ್ದು, ಈ ಪೈಕಿ 26,228 ಪುರುಷರು ಹಾಗೂ 26,669 ಮಹಿಳೆಯರು. ಪ.ಪಂಗಡದಲ್ಲಿ ಕೊರಗರ ಜನಸಂಖ್ಯೆ 11,133. ಮಲೆಕುಡಿಯರ ಸಂಖ್ಯೆ 1,956 ಹಾಗೂ ಮರಾಠಿ ನಾಯ್ಕರ ಸಂಖ್ಯೆ 39,808 ಆಗಿದೆ ಎಂದರು.
ಇವುಗಳಲ್ಲಿ ಉಡುಪಿ ತಾಲೂಕಿನಲ್ಲಿ 1,283 ಕೊರಗ ಕುಟುಂಬಗಳಿದ್ದು, ಇವರ ಜನಸಂಖ್ಯೆ 6,200 ಆಗಿದೆ. ಕುಂದಾಪುರ ತಾಲೂಕಿನಲ್ಲಿ 853 ಕುಟುಂಬಗಳಲ್ಲಿ 3,154 ಮಂದಿ ಇದ್ದರೆ, ಕಾರ್ಕಳ ತಾಲೂಕಿನಲ್ಲಿರುವ 432 ಕುಟುಂಬಗಳಲ್ಲಿ 1,779 ಕೊರಗ ಸದಸ್ಯರಿದ್ದಾರೆ ಎಂದರು.
ಜಿಲ್ಲೆಯ ಕೊರಗಲ್ಲಿ 276 ಮಂದಿ ಸ್ವಯ ಉದ್ಯೋಗದಲ್ಲಿದ್ದರೆ, 197 ಮಂದಿ ಸರಕಾರಿ ಉದ್ಯೋಗಗಳಲ್ಲಿದ್ದಾರೆ.366 ಮಂದಿ ಖಾಸಗಿಯವರಲ್ಲಿ ಉದ್ಯೋಗ ಮಾಡುತ್ತಿದ್ದರೆ, 327 ಮಂದಿ ಕೃಷಿ ಕೂಲಿಕಾರರಾಗಿದ್ದಾರೆ. 1,961 ಮಂದಿ ಇತರೆ ಉದ್ಯೋಗದಲ್ಲಿದ್ದಾರೆ. ಕೊರಗ ಸಮುದಾಯದಲ್ಲಿ 77 ಮಂದಿ ಪಿಂಚಣಿ ದಾರರಿದ್ದಾರೆ ಎಂದೂ ಗಾಂವ್ಕರ್ ತಿಳಿಸಿದರು.
ಕೊರಗ ಸಮುದಾಯದಲ್ಲಿ 8,260 ಮಂದಿ ಆಧಾರ್ ಕಾರ್ಡ್‌ಗಳನ್ನು ಹೊಂದಿದ್ದರೆ, 6,754 ಮಂದಿ ಬ್ಯಾಂಕ್‌ಖಾತೆಯನ್ನು ಹೊಂದಿದ್ದಾರೆ. 2078 ಮಂದಿ ಪಡಿತರ ಚೀಟಿಯನ್ನು ಪಡೆದಿ ದ್ದಾರೆ. 1,480 ಕುಟುಂಬ ಸ್ವಂತ (ಪಟ್ಟಾ) ನಿವೇಶನಗಳನ್ನು ಹೊಂದಿದ್ದರೆ, 387 ಕುಟುಂಬ ಸರಕಾರಿ ಜಾಗದಲ್ಲಿ ವಾಸವಾಗಿದೆ. 171 ಮಂದಿ ಖಾಸಗಿಯವರ ಜಾಗದಲ್ಲಿ ಕುಳಿತಿದ್ದಾರೆ ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಕಾಲ್ತೋಡು ಗ್ರಾಪಂ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ ಬಟ್ನಾಡಿ, ಮಾಜಿ ಸದಸ್ಯ ಆನಂದ್ ಶೆಟ್ಟಿ, ಐಟಿಡಿಪಿ ಮ್ಯಾನೇಜರ್ ವಿಶ್ವನಾಥ್ ಹಾಗೂ ಇತರರು ಉಪಸ್ಥಿತರಿದ್ದರು.







