ಕೊಳವೆಬಾವಿ ವಿರುದ್ಧದ ನಿರ್ಬಂಧ ತೆರವಿಗೆ ಆಗ್ರಹ
ಜ.3ರಂದು ಡಿಸಿ ಕಚೇರಿ ಮುಂದೆ ಧರಣಿ
ಮಂಗಳೂರು, ಡಿ.30: ಕೊಳವೆಬಾವಿ ಕೊರೆಯುವುದನ್ನು ನಿರ್ಬಂಧಿಸಿರುವ ರಾಜ್ಯ ಸರಕಾರದ ಆದೇಶದ ವಿರುದ್ಧ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ದ.ಕ., ಉಡುಪಿ ಜಿಲ್ಲೆಯ ಸಾರ್ವಜನಿಕರ ಸಹಯೋಗದಲ್ಲಿ ಜ.3ರಂದು ಪೂರ್ವಾಹ್ನ 11ಕ್ಕೆ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ರವಿಕುಮಾರ್ ಪುಣಚ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕೊಳವೆಬಾವಿ ಕೊರೆಸುವುದನ್ನು ನಿರ್ಬಂಧಿಸಿ ಸರಕಾರ ಹೊರಡಿಸಿರುವ ಆದೇಶ ಅವಳಿ ಜಿಲ್ಲೆಯ ರೈತರಿಗೆ ಮತ್ತು ನಾಗರಿಕರಿಗೆ ಮರಣಶಾಸನವಾಗಿದೆ. ಅವಳಿ ಜಿಲ್ಲೆಯಲ್ಲಿ ಬೆಳೆದು ನಿಂತ ಕೃಷಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರ ಮೂಲಭೂತ ಸೌಕರ್ಯವಾದ ಕುಡಿಯುವ ನೀರಿನ ವ್ಯವಸ್ಥೆಗಾಗಿ ಈ ಮೇಲಿನ ಆದೇಶವನ್ನು ರದ್ದುಪಡಿಸಲು ಆಗ್ರಹಿಸಿ ಈ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಆಂದೋಲನ ಸಮಿತಿ ರಾಜ್ಯಾಧ್ಯಕ್ಷ ವಿಜಯಕುಮಾರ್ ಹೆಗ್ಡೆ, ರೂಪೇಶ್ ರೈ, ತಾರನಾಥ ಗೌಡ, ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.





