ಪ್ರಧಾನಿ ಮೋದಿಗೆ ರಾಹುಲ್‌ರ 5 ಪ್ರಶ್ನೆಗಳು
ನೋಟು ರದ್ದತಿ
ಹೊಸದಿಲ್ಲಿ, ಡಿ.30: ನೋಟು ರದ್ದತಿಯಾಗಿ 50 ದಿನಗಳು ತುಂಬಿವೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಇಂದು ಪ್ರಧಾನಿಗೆ ಐದು ಪ್ರಶ್ನೆಗಳನ್ನು ಹಾಕಿದ್ದಾರೆ. ನ.8ರ ಬಳಿಕ ಎಷ್ಟು ಕಪ್ಪುಹಣ ಹೊರ ಬಂದಿದೆ ಹಾಗೂ ಈ ಉಗ್ರ ಕ್ರಮದಿಂದ ಎಷ್ಟು ಉದ್ಯೋಗಗಳು ನಷ್ಟವಾಗಿವೆ ಎಂಬವು ಅವುಗಳಲ್ಲಿ ಸೇರಿವೆ.
ಈ ನಿರ್ಧಾರವನ್ನು ಕೈಗೊಳ್ಳುವ ಮೊದಲು ಪ್ರಧಾನಿ ನರೇಂದ್ರ ಮೋದಿ ಯಾರೊಡನೆ ಸಮಾಲೋಚನೆ ನಡೆಸಿದ್ದಾರೆ ಎಂದು ಟ್ವಿಟರ್‌ನಲ್ಲಿ ಪ್ರಶ್ನಿಸಿರುವ ರಾಹುಲ್, ಯಾಕೆ ಪರಿಣತ ಆರ್ಥಿಕ ತಜ್ಞರು ಹಾಗೂ ಆರ್‌ಬಿಐಯೊಂದಿಗೆ ಸಮಾಲೋಚಿಸಿಲ್ಲವೆಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿರುವ ಒಂದು ದಿನ ಮೊದಲು ಅವರು ಈ ಪ್ರಶ್ನೆಗಳನ್ನು ಕೇಳಿದ್ದಾರೆ.
ನ.8ರ ನೋಟು ರದ್ದತಿ ನಿರ್ಧಾರದ 6 ತಿಂಗಳ ಮೊದಲು ರೂ.25ಲಕ್ಷಕ್ಕಿಂತ ಹೆಚ್ಚು ಹಣವನ್ನು ಯಾರೆಲ್ಲ ಬ್ಯಾಂಕ್‌ಗಳಲ್ಲಿ ಠೇವಣಿಯಿರಿಸಿದ್ದಾರೆಂದು ರಾಹುಲ್ ತಿಳಿಯಬಯಸಿದ್ದಾರೆ.
‘‘ನೋಟು ರದ್ದತಿಯಾಗಿ 50 ದಿನಗಳಾಗಿದ್ದು, ಈ 5 ಪ್ರಶ್ನೆಗಳಿಗೆ ದೇಶವು ನಿಮ್ಮಿಂದ ಉತ್ತರವನ್ನು ಬಯಸುತ್ತಿದೆ ಮೋದಿಜಿ. 2016ರ ನ.8ರ ಬಳಿಕ ಹೊರಬಂದಿರುವ ಕಪ್ಪುಹಣದ ಮೊತ್ತವೆಷ್ಟು? ರಾಷ್ಟ್ರಕ್ಕಾದ ಆರ್ಥಿಕ ನಷ್ಟವೆಷ್ಟು? ಎಷ್ಟು ಉದ್ಯೋಗಗಳು ನಷ್ಟವಾಗಿವೆ? ನೋಟು ನಿಷೇಧದಿಂದ ಎಷ್ಟು ಮಂದಿ ಸತ್ತಿದ್ದಾರೆ? ಹಾಗೂ ಅವರಿಗೆ ಪರಿಹಾರ ನೀಡಲಾಗಿದೆಯೇ?’’ ಎಂದವರು ಪ್ರಶ್ನಿಸಿದ್ದಾರೆ.





