ಅಮ್ಮನ ಸ್ಥಾನವನ್ನು ಚಿಕ್ಕಮ್ಮ ತುಂಬಲು ಸಾಧ್ಯವೆ?

ಸಾಧಾರಣವಾಗಿ ‘ಚಿಕ್ಕಮ್ಮ’ನಿಗೆ ಒಂದು ಋಣಾತ್ಮಕವಾದ ಧ್ವನಿ ಇದೆ. ಅಮ್ಮನ ಸ್ಥಾನವನ್ನು ಚಿಕ್ಕಮ್ಮ ತುಂಬಲಾರಳು ಎನ್ನುವ ಮಾತಿಗೆ ಸುದೀರ್ಘ ಇತಿಹಾಸವಿದೆ. ಆದುದರಿಂದಲೇ ಜಾನಪದ ಕತೆಗಳಲ್ಲಿ ಮಲಮಕ್ಕಳನ್ನು ತುಚ್ಛವಾಗಿ ಕಾಣುವ ಚಿಕ್ಕಮ್ಮ ಅಥವಾ ಮಲತಾಯಿಯ ಕತೆಗಳಿಗೆ ಲೆಕ್ಕವಿಲ್ಲ. ಹಾಗೆಂದು ಎಲ್ಲ ಚಿಕ್ಕಮ್ಮಂದಿರೂ ಕತೆಗಳಲ್ಲಿ ಬರುವ ಚಿಕ್ಕಮ್ಮಂದಿರಂತೆ ಇರಬೇಕಾಗಿಯೂ ಇಲ್ಲ. ತಮಿಳುನಾಡಿನಲ್ಲಿ ‘ಅಮ್ಮ’ ತೀರಿ ಹೋದಾಗ ಮಕ್ಕಳೆಲ್ಲ ತಬ್ಬಲಿಯಾಗಿಯೇ ಬಿಟ್ಟರೋ ಎನ್ನುವ ಸಂದರ್ಭದಲ್ಲಿ ‘ಚಿಕ್ಕಮ್ಮ’ನ ಪ್ರವೇಶವಾಗಿದೆ. ಎಂಜಿಆರ್ ತೀರಿಕೊಂಡಾಗ ಅವರ ಸ್ಥಾನವನ್ನು ಅಮ್ಮ ಜಯಲಲಿತಾ ತುಂಬಿದಂತೆಯೇ ಇದೀಗ ಜಯಲಲಿತಾ ತೀರಿ ಹೋದ ಸಂದರ್ಭವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಿರುವ ಅವರ ‘ಗೆಳತಿ’ ಪಕ್ಷದ ಚುಕ್ಕಾಣಿಯನ್ನು ಕೈಗೆತ್ತಿಕೊಳ್ಳುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ. ಜಯಲಲಿತಾ ನಿರ್ಗಮನದ ಬಳಿಕ, ತಮಿಳುನಾಡಿನಲ್ಲಿ ಎಡಿಎಂಕೆ ಹೋಳಾಗುತ್ತದೆ, ಅಧಿಕಾರಕ್ಕಾಗಿ ತಿಕ್ಕಾಟ ನಡೆಯುತ್ತದೆ ಎನ್ನುವ ರಾಜಕೀಯ ಲೆಕ್ಕಾಚಾರಗಳೆಲ್ಲ ಬುಡಮೇಲಾಗುವಂತೆ ಶಶಿಕಲಾ ಸಂದರ್ಭವನ್ನು ನಿಭಾಯಿಸಿದ್ದಾರೆ. ಆದರೆ ಇದು ತಮಿಳುನಾಡಿಗೆ ಮತ್ತು ಎಡಿಎಂಕೆಗೆ ಎಷ್ಟರ ಮಟ್ಟಿಗೆ ನೆರವಾಗುತ್ತದೆ ಎನ್ನುವುದನ್ನು ಮಾತ್ರ ಕಾಲವೇ ಹೇಳಬೇಕು.
ಜಯಲಲಿತಾ ರಾಜಕೀಯಕ್ಕೆ ಕಾಲಿಡುವ ಮೊದಲು ಸಿನೆಮಾ ರಂಗದಲ್ಲಿ ಕಲಾವಿದೆಯಾಗಿ ಹೆಸರುವಾಸಿಯಾದವರು ಮತ್ತು ಜನಮನದಲ್ಲಿ ಬೇರೂರಿದವರು. ಹಾಗೆಯೇ ಎಂಜಿಆರ್ ಅವರ ನೆರಳು ಜಯಲಲಿತಾ ಅವರಿಗೊಂದು ಭಿನ್ನ ವ್ಯಕ್ತಿತ್ವವನ್ನು ನೀಡಿತ್ತು. ಜನರಿಗೆ ಮಿಡಿಯುವ ಹೃದಯವನ್ನು ಕಲಾವಿದರು ಅತಿ ಬೇಗ ಮೈಗೂಡಿಸಿಕೊಳ್ಳುತ್ತಾರೆ. ನಟನೆ ರಾಜಕೀಯದ ಒಂದು ಭಾಗವೇ ಆಗಿರುವುದರಿಂದ, ಸಿನೆಮಾ ನಟರು ಆದಷ್ಟು ಬೇಗ ರಾಜಕೀಯವನ್ನು ಕಲಿಯುತ್ತಾರೆ. ಎಂಜಿಆರ್ ಅವರು ಮೃತಪಟ್ಟ ಪಟ್ಟ ಬಳಿಕ ಆವರಿಸಿಕೊಂಡ ನಿರ್ವಾತವನ್ನು ತುಂಬಲು ಜಯಲಲಿತಾ ಅವರಿಗೆ ಈ ಕಾರಣದಿಂದಲೇ ಸುಲಭವಾಗುತ್ತದೆ. ಒಬ್ಬ ಮಹಿಳೆ ಎನ್ನುವ ದೃಷ್ಟಿಯಲ್ಲಿ, ಕರುಣಾನಿಧಿ ನೇತೃತ್ವದ ಡಿಎಂಕೆ ಪಕ್ಷ ಜಯಲಲಿತಾ ಅವರನ್ನು ನಿಕೃಷ್ಟವಾಗಿ ಬಗ್ಗುಬಡಿಯಲು ಹೊರಟದ್ದೂ ಜಯಲಲಿತಾಗೆ ಅನುಕಂಪದ ಅಲೆಯನ್ನು ದೊರಕಿಸಿಕೊಟ್ಟಿತು. ತನಗಾದ ಅವಮಾನ, ತನ್ನ ಮೇಲೆ ರಾಜಕೀಯ ವಿರೋಧಿಗಳು ನಡೆಸಿದ ಹಲ್ಲೆ ಇತ್ಯಾದಿಗಳನ್ನೆಲ್ಲ ರಾಜಕೀಯದಲ್ಲಿ ಮೇಲೇರಲು ಏಣಿಯಾಗಿ ಬಳಸಿಕೊಂಡರು.
ಎಂಜಿಆರ್ ಆಡಳಿತವನ್ನು ಹತ್ತಿರದಿಂದ ನೋಡಿರುವ ಜಯಲಲಿತಾ ಅವರಿಗೆ ರಾಜಕೀಯ, ಜನರ ನಾಡಿಮಿಡಿತ ಚೆನ್ನಾಗಿ ಗೊತ್ತಿತ್ತು ಮತ್ತು ಎಂಜಿಆರ್ ಬಿಟ್ಟು ಹೋದ ದಾರಿಯಲ್ಲೇ ಅವರು ಮುನ್ನಡೆದರು. ರಾಜಕೀಯ ಏಳುಬೀಳುಗಳು ಅವರನ್ನು ಇನ್ನಷ್ಟು ಗಟ್ಟಿಯಾಗಿಸಿತು. ಹಾಗೆಯೇ ದೇಶದ ಪರಮ ಭ್ರಷ್ಟ ನಾಯಕಿಯಾಗಿ ಗುರುತಿಸಲ್ಪಟ್ಟವರು ಜಯಲಲಿತಾ. ಜನರ ಹಣವನ್ನು ದೋಚಿ, ಅದರಲ್ಲಿ ಮಹಾರಾಣಿಯಾಗಿ ಮೆರೆದವರು. ಅಧಿಕಾರದ ಮದ ಅವರಲ್ಲಿ ಸರ್ವಾಧಿಕಾರ ಮನಸ್ಥಿತಿಯನ್ನು ಸ್ಥಾಪಿಸಿತ್ತು. ಈ ಎಲ್ಲ ಅವ್ಯವಹಾರಗಳಲ್ಲಿ ಜಯಲಲಿತಾ ಅವರ ಜೊತೆ ನಿಲ್ಲುವ ಮೂಲಕವೇ ಶಶಿಕಲಾ ಗುರುತಿಸಲ್ಪಟ್ಟರು. ಜಯಲಲಿತಾ ಅವರ ಗೆಳತಿಯೆಂದು ಗುರುತಿಸಲ್ಪಡುತ್ತಾ, ಜಯಲಲಿತಾ ಅಧಿಕಾರದಲ್ಲಿ ಪರೋಕ್ಷ ಪಾಲನ್ನು ಪಡೆದುಕೊಂಡವರು ಶಶಿಕಲಾ. ಒಂದು ರೀತಿಯಲ್ಲಿ ಜಯಲಲಿತಾ ಅವರ ಅವ್ಯವಹಾರಗಳಲ್ಲಿ ಶಶಿಕಲಾ ಮತ್ತು ಆಕೆಯ ಬಳಗದ ಪಾತ್ರ ಬಹುದೊಡ್ಡದು. ಜಯಲಲಿತಾ ಅವರು ಕುಟುಂಬದ ನಂಟನ್ನು ಕಡಿದುಕೊಂಡಿದ್ದ ಕಾಲ ಅದು. ಜಯಲಲಿತಾ ಅವರು ಎಂಜಿಆರ್‌ಗೂ ಅಧಿಕೃತ ಪತ್ನಿಯಾಗಿರಲಿಲ್ಲ. ಆಕೆಯ ಈ ಒಂಟಿತನ, ಏಕಾಂತವನ್ನು ಸರ್ವರೀತಿಯಲ್ಲಿ ದುರ್ಬಳಕೆ ಮಾಡಿಕೊಂಡವರು ಶಶಿಕಲಾ. ಈಕೆ ಆಡಿಸಿದಂತೆಯೇ ಜಯಲಲಿತಾ ಆಡುತ್ತಿದ್ದರು ಎಂಬ ಆರೋಪವೂ ಇತ್ತು. ಜಯಲಲಿತಾ ಅಂತಿಮ ದಿನಗಳಲ್ಲಿ ಅದು ಸಾಬೀತಾಯಿತು ಕೂಡ. ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿ ಶಶಿಕಲಾ ತನ್ನ ಗೆಳತಿ ಜಯಲಲಿತಾ ಅವರನ್ನು ರಕ್ಷಿಸಿದರು ಎನ್ನೋದು ಇನ್ನೊಂದು ಮಾತು. ಶಶಿಕಲಾ ಏನಾದರೂ ಬಾಯಿ ಬಿಟ್ಟಿದ್ದರೆ ಜಯಲಲಿತಾ ಜೈಲಲ್ಲಿರಬೇಕಾಗಿತ್ತು ಎನ್ನುವ ಅಭಿಪ್ರಾಯವೂ ಇದೆ. ಜಯಲಲಿತಾ ಅವರ ಅಂತಿಮ ದಿನಗಳಲ್ಲಿ, ಶಶಿಕಲಾ ಪರೋಕ್ಷವಾಗಿ ಜಯಲಲಿತಾ ಅವರನ್ನು ಬ್ಲಾಕ್‌ಮೇಲ್ ಮಾಡುವ ಮೂಲಕ ಆಕೆಯ ಮೇಲೆ ನಿಯಂತ್ರಣವನ್ನು ಹೊಂದಿದ್ದರು ಎಂಬ ಆರೋಪದಲ್ಲಿ ಹುರುಳಿಲ್ಲದೇ ಇಲ್ಲ.
ಜಯಲಲಿತಾ ಅನಿವಾರ್ಯವಾಗಿ ಶಶಿಕಲಾ ಅವರ ಸೂತ್ರದ ಗೊಂಬೆಯಾಗಿ ಪರಿವರ್ತನೆಗೊಂಡಿದ್ದರು. ಶಶಿಕಲಾ ಬಿಟ್ಟರೆ ಆಕೆಗೆ ಬೇರೆ ಬಂಧುಗಳೇ ಇಲ್ಲ ಎನ್ನುವಂತಹ ಸನ್ನಿವೇಶ ಸೃಷ್ಟಿಯಾಗಿತ್ತು. ಜೊತೆಗೆ ಶಶಿಕಲಾ ಅವರನ್ನು ದೂರ ಮಾಡಿದರೆ, ರಾಜಕೀಯವಾಗಿ ಆಪತ್ತನ್ನು ಎದುರಿಸುವಂತಹ ಸನ್ನಿವೇಶವೂ ಇತ್ತು. ಈ ಎಲ್ಲ ಕಾರಣಗಳಿಂದ, ಇತ್ತೀಚಿನ ದಿನಗಳಲ್ಲಿ ಜಯಲಲಿತಾ ಹೆಸರಿಗಷ್ಟೇ ಮುಖ್ಯಮಂತ್ರಿಯಾಗಿದ್ದರು. ಹಿಂದಿನಿಂದ ಸರ್ವವನ್ನೂ ಶಶಿಕಲಾ ಅವರೇ ನಿಯಂತ್ರಿಸುತ್ತಿದ್ದರು. ಈ ಕಾರಣದಿಂದಲೇ, ಜಯಲಲಿತಾ ಬಳಿಕ ಸುಲಭದಲ್ಲಿ ಆ ಸ್ಥಾನವನ್ನು ತುಂಬುವುದಕ್ಕೆ ಶಶಿಕಲಾ ಅವರಿಗೆ ಸಾಧ್ಯವಾಯಿತು.
ಆದರೆ ತಮಿಳುನಾಡು ಶಶಿಕಲಾ ಅವರಿಂದ ಒಳ್ಳೆಯದನ್ನು ನಿರೀಕ್ಷಿಸುವುದು ಕಷ್ಟ. ಮುಖ್ಯವಾಗಿ ಶಶಿಕಲಾ ಹುಟ್ಟಿದ್ದು ಜಯಲಲಿತಾ ಅವರ ಭ್ರಷ್ಟಾಚಾರದ ಗರ್ಭದಿಂದ. ಆಕೆಯ ರಾಜಕೀಯ ಹಿನ್ನೆಲೆ, ವರ್ಚಸ್ಸು ಋಣಾತ್ಮಕ ಮಾರ್ಗದಿಂದ ಬಂದಿರುವುದು. ಜಯಲಲಿತಾ ಅವರಲ್ಲಿ ತೋರಿಕೆಯ ತಾಯಿ ಹೃದಯವಾದರೂ ಇತ್ತು. ಕಲಾವಿದೆಯ ಸಂವೇದನಾಶೀಲತೆ ಆಕೆಗೆ ರಾಜಕೀಯವಾಗಿ ತುಂಬಾ ಸಹಾಯ ಮಾಡಿತ್ತು. ಅಂತಹ ಸಂವೇದನಾಶೀಲತೆಯನ್ನು ಶಶಿಕಲಾ ಅವರಿಂದ ಜನರು ನಿರೀಕ್ಷಿಸುವಂತಿಲ್ಲ. ಜೊತೆಗೆ, ಶಶಿಕಲಾ ಮೇಲಿರುವ ಭ್ರಷ್ಟಾಚಾರ ಪ್ರಕರಣ, ಆಕೆಯನ್ನೂ ಆಕೆಯ ಪಕ್ಷವನ್ನು ಮುಂದಿನ ದಿನಗಳಲ್ಲಿ ಆಪೋಷಣ ತೆಗೆದುಕೊಳ್ಳುವ ಎಲ್ಲ ಸೂಚನೆಗಳು ಕಾಣುತ್ತಿವೆ. ಈಗಾಗಲೇ ತಮಿಳುನಾಡಿನ ಮೇಲೆ ಬಿಜೆಪಿಯ ಕಣ್ಣು ಬಿದ್ದಿದೆ.
ತಮಿಳುನಾಡಿನಲ್ಲಿ ತನ್ನ ಬೇರನ್ನು ಇಳಿಸಿಕೊಳ್ಳಲು ಬಿಜೆಪಿ ಶಶಿಕಲಾ ಅವರನ್ನು ಬಳಸಿಕೊಳ್ಳುವ ಸಾಧ್ಯತೆಗಳಿವೆ. ಇಂದು ಶಶಿಕಲಾ ಅವರಿಗೆ ತನ್ನನ್ನು ತಾನು ಉಳಿಸಿಕೊಳ್ಳುವುದಕ್ಕೇ ಅಧಿಕಾರ ಬೇಕಾಗಿದೆ. ಒಂದು ವೇಳೆ ಆಕೆ ಅಧಿಕಾರವೇನೂ ಬೇಡವೆಂದು ಈ ಹುಲಿ ಸವಾರಿಯಿಂದ ಕೆಳಗಿಳಿದು ಬಿಟ್ಟರೆ ಆ ಹುಲಿಯೇ ಆಕೆಯನ್ನು ತಿಂದು ಹಾಕಬಹುದು. ಆಕೆಯ ಪ್ರತಿಸ್ಪರ್ಧಿಗಳು ಆಕೆಯ ವಿರುದ್ಧ ಇರುವ ಪ್ರಕರಣಗಳನ್ನ್ನು ಗಟ್ಟಿಗೊಳಿಸಿ ಶಾಶ್ವತ ಜೈಲು ಕಂಬಿ ಎಣಿಸುವಂತೆ ಮಾಡಬಹುದು. ಇದೇ ಸಂದರ್ಭದಲ್ಲಿ ಮುಂದೆ ಆಕೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾದರೂ ಕೇಂದ್ರ ಬಿಜೆಪಿ ನಾಯಕರು ಆಕೆಯ ಬೆನ್ನು ಹತ್ತಬಹುದು. ಆಕೆಯ ಮೇಲೆ ತನಿಖಾ ಸಂಸ್ಥೆಗಳನ್ನು ಛೂಬಿಟ್ಟು ನಿದ್ದೆಕೆಡಿಸಬಹುದು. ಆ ಮೂಲಕವೇ ಬಿಜೆಪಿಯ ಜೊತೆಗೆ ಎಡಿಎಂಕೆ ಮೈತ್ರಿ ಅನಿವಾರ್ಯ ಎನ್ನುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಬಹುದು. ಒಟ್ಟಿನಲ್ಲಿ ಯಾವ ದೃಷ್ಟಿಯಿಂದ ನೋಡಿದರೂ ಶಶಿಕಲಾ ನೇತೃತ್ವ ಪಕ್ಷಕ್ಕಾಗಲಿ, ತಮಿಳುನಾಡಿಗಾಗಲಿ ಒಳಿತನ್ನು ಮಾಡುವ ಸಾಧ್ಯತೆಗಳು ಕಾಣುತ್ತಿಲ್ಲ. ಅಂತಿಮವಾಗಿ ತಮಿಳರ ಪಾಲಿಗೆ ಶಶಿಕಲಾ ಕೆಟ್ಟ ‘‘ಚಿಕ್ಕಮ’’ ಆಗಿಯೇ ಉಳಿಯಲಿದ್ದಾರೆಯೋ ಎಂಬ ಅನುಮಾನ ರಾಜಕೀಯ ಪಂಡಿತರನ್ನು ಕಾಡುತ್ತಿದೆ.







