ಮೂಡುಬಿದಿರೆ : ಬೀಳ್ಕೊಡುಗೆ ಸಮಾರಂಭ

ಮೂಡುಬಿದಿರೆ , ಡಿ. 30 : ವೃತ್ತಿಯನ್ನು ಅನುಭವಿಸಿಕೊಂಡು ಮಾಡಿದರೆ ಅದರಲ್ಲಿ ಸುಖ ಹೆಚ್ಚು. ಕೆಲಸ ಯಾವುದೇ ಇರಬಹುದು, ಅದರಲ್ಲಿ ನಿಷ್ಠೆ, ಪ್ರಾಮಾಣಿಕತೆ, ಕ್ರಿಯಾಶೀಲತೆ ಅಗತ್ಯ ಎಂದು ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರಾಜಶ್ರೀ ಅಭಿಪ್ರಾಯಪಟ್ಟರು. ಬೆಳುವಾಯಿ ಸ್ವಾಮಿ ಮುಕ್ತಾನಂದ ಪ್ರೌಢಶಾಲೆಯಲ್ಲಿ 35 ವರ್ಷಗಳಿಂದ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಗುಣಪಾಲ ಮುದ್ಯರ ವಿದಾಯ ಸಮಾರಂಭ, ಶುಕ್ರವಾರ ಶಾಲಾ ಸಭಾಂಗಣದಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರಾಜಶ್ರೀ, ಶಿಕ್ಷಣ ಕ್ಷೇತ್ರದಲ್ಲಿನ ಕರ್ತವ್ಯದಿಂದ ಆಪ್ತತೆ ಹೆಚ್ಚುತ್ತದೆ.ಉತ್ತಮ ವ್ಯಕ್ತಿತ್ವ ಮೂಡುತ್ತದೆ ಎಂದರು.
ಗುಣಪಾಲ ಮುದ್ಯರನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳ ಪರವಾಗಿ ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ, ಸನ್ಮಾನ ಪತ್ರದೊಂದಿಗೆ ಚಿನ್ನದ ಉಂಗುರ ತೊಡಿಸಿ ಗೌರವಿಸಲಾಯಿತು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ರಾಜೇಶ್ ಸುವರ್ಣ, ಸಂಚಾಲಕ ವಿನಯ ಕುಮಾರ್ ಹೆಗ್ಡೆ, ಕೋಶಾಧಿಕಾರಿ ವಂದನಾ ಪ್ರಭು, ಶಾಲಾ ಸ್ಥಾಪಕರಲ್ಲೋರ್ವರಾದ ಜೆ.ಎಂ. ಪಡುಬಿದ್ರಿ, ಸದಸ್ಯರಾದ ಹಸ್ದುಲ್ಲಾ ಇಸ್ಮಾಯಿಲ್, ಯುವರಾಜ್ ಜೈನ್, ವಸಂತ ಶೆಟ್ಟಿ, ರಾಘು ಪೂಜಾರಿ, ಬೆಳುವಾಯಿ ಪಂಚಾಯತ್ ಅಧ್ಯಕ್ಷ ಭಾಸ್ಕರ ಆಚಾರ್ಯ, ಶಿರ್ತಾಡಿ ಶಿಮುಂಜೆಗುತ್ತು ಸಂಪತ್ ಸಾಮ್ರಾಜ್ಯ, ಶಾಲಾ ಮುಖ್ಯೋಪಾಧ್ಯಾಯ ಸದಾಶಿವ ಶೆಟ್ಟಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಪೂಜಾರಿ, ಉಪಾಧ್ಯಕ್ಷ ಆಲ್ವಿನ್ ಕ್ವಾಡ್ರಸ್ ಉಪಸ್ಥಿತರಿದ್ದರು.
ಮುದ್ಯರ ಅಭಿಮಾನಿಗಳು ಹಾಗೂ ಸಹವರ್ತಿಗಳು ಹಾರಾರ್ಪಿಸಿ ಅಭಿನಂದಿಸಿದರು.
ನಿವೃತ್ತ ಅಧ್ಯಾಪಕರಾದ ಕುಮಾರಸ್ವಾಮಿ, ದೇವದಾಸ ಹೆಗ್ಡೆ, ಕೃಷಿಕ ಸದಾಶಿವ ಶೆಟ್ಟಿ, ಶ್ರೀಪಾಲ್ ಎಸ್. ಅಭಿನಂದನಾ ಮಾತನಾಡಿದರು. ವಿನಯಕುಮಾರ್ ಹೆಗ್ಡೆ ಸ್ವಾಗತಿಸಿದರು. ಶಿಕ್ಷಕ ಪುರುಷೋತ್ತಮ ರಾವ್ ಧನ್ಯವಾದವಿತ್ತರು. ಎ.ದೇವದಾಸ ಕಿಣಿ ಕಾರ್ಯಕ್ರಮ ನಿರೂಪಿಸಿದರು.







