ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಅನಿಲ್ ಬೈಜಾಲ್ ಅಧಿಕಾರ ಸ್ವೀಕಾರ
ಹೊಸದಿಲ್ಲಿ, ಡಿ.31: ದಿಲ್ಲಿಯ ಎಎಪಿ ಸರಕಾರ ಹಾಗೂ ಕೇಂದ್ರ ಸರಕಾರಗಳ ನಡುವೆ ಉದ್ವಿಗ್ನತೆ ಹೆಚ್ಚಿರುವ ನಡುವೆಯೇ, ವೃತ್ತಿಪರ ಆಡಳಿತಗಾರ ಅನಿಲ್ ಬೈಜಾಲ್, ಇಂದು ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಅರವಿಂದ ಕೇಜ್ರಿವಾಲ್‌ರ ಸರಕಾರದೊಂದಿಗೆ ಭವಿಷ್ಯದ ತನ್ನ ಸಂಬಂಧದ ಕುರಿತು ಎಚ್ಚರಿಕೆಯ ಸಂದೇಶವೊಂದನ್ನು ಅವರು ನೀಡಿದ್ದಾರೆ.
ಆದಾಗ್ಯೂ, ದಿಲ್ಲಿಯ ಏಳಿಗೆಗಾಗಿ ತಾನು ಎಎಪಿ ಸರಕಾರದೊಂದಿಗೆ ಕೆಲಸ ಮಾಡಲಿದ್ದೇನೆಂದು 70ರ ಹರೆಯದ ಬೈಜಾಲ್ ತಿಳಿಸಿದ್ದಾರೆ.
ಪ್ರಮಾಣವಚನ ಸ್ವೀಕರಿಸಿದ ಬಳಿಕ, ಆಪ್ ಸರಕಾರದೊಂದಿಗೆ ಅವರ ಸಂಬಂಧದ ಕುರಿತು ಪ್ರಶ್ನಿಸಿದಾಗ, ಇದೊಂದು ಊಹಿಸಬೇಕಾದ ವಿಷಯವಾಗಿದೆ. ಸಂಬಂಧ ಹೇಗೆ ಸುಧಾರಿಸಬಹುದೆಂಬುದು ತನಗೆ ತಿಳಿದಿಲ್ಲವೆಂದು ಬೈಜಾಲ್ ಉತ್ತರಿಸಿದ್ದಾರೆ.
ತಾವು ಒಟ್ಟಿಗೆ ಕುಳಿತು ಮಾತನಾಡುತ್ತೇವೆ ಎಂದ ಅವರು, ತನಗೆ ಲೆೆಫ್ಟಿನೆಂಟ್ ಗವರ್ನರ್‌ರ ಹೊಣೆಗಾರಿಕೆ ನೀಡಿದುದಕ್ಕಾಗಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹಾಗೂ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ದಿಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜ. ರೋಹಿಣಿ, ನೂತನ ಲೆಫ್ಟಿನೆಂಟ್ ಗವರ್ನರ್ ಬೈಜಾಲ್‌ರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಸಮಾರಂಭದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಹಾಗೂ ದಿಲ್ಲಿಯ ಸಂಸದೆ ಮೀನಾಕ್ಷಿ ಲೇಖಿ ಉಪಸ್ಥಿತರಿದ್ದರು.







