ಬಿಜೆಪಿ ಪರ ಉದ್ಯಮಿಗಳ ಕಪ್ಪುಹಣ ಬಿಳಿಯಾಯಿತಷ್ಟೆ: ಐವನ್ ಡಿಸೋಜ
ನೋಟು ಅಮಾನ್ಯ ಪ್ರಕರಣ
ಮಂಗಳೂರು, ಡಿ.31: ನೋಟುಗಳ ಅಮಾನ್ಯದಿಂದ ಬಿಜೆಪಿ ಪರ ಉದ್ಯಮಿಗಳು ಲಾಭ ಮಾಡಿಕೊಂಡರೇ ವಿನಹ ಜನತೆಗೆ ಏನೂ ಲಾಭವಾಗಿಲ್ಲ. ಬಿಜೆಪಿ ಪರ ಉದ್ಯಮಿಗಳ ಕಪ್ಪು ಹಣವನ್ನು ಬಿಳಿ ಮಾಡುವುದಕ್ಕಾಗಿಯೇ ನೋಟುಗಳನ್ನು ಅಮಾನ್ಯಗೊಳಿಸಿದರು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದರು.
ಶನಿವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಕಳೆದ 50 ದಿನಗಳಲ್ಲಿ ಆರ್‌ಬಿಐ ಮೂಲಕ 46 ಸುತ್ತೋಲೆಗಳನ್ನು ಹೊರಡಿಸಿ ಜನತೆಯ ತಾಳ್ಮೆ ಪರೀಕ್ಷಿಸಿದ್ದಾರೆ. ಜ.1ರ ಬಳಿಕ ದೇಶದ ಆರ್ಥಿಕ ಸ್ಥಿತಿ ಯಾವ ಹಂತ ತಲುಪಬಹುದು ಎಂಬ ಆತಂಕವನ್ನು ಜನತೆ ವ್ಯಕ್ತಪಡಿಸುತ್ತಿದ್ದಾರೆ ಎಂದು ನುಡಿದರು.
400 ಕೋ. ರೂ.ನಷ್ಟು ಕಳ್ಳನೋಟು ಪತ್ತೆಗಾಗಿ 18 ಸಾವಿರ ಕೋ.ರೂ. ಖರ್ಚು ಮಾಡುವ ಮೂಲಕ ಪ್ರಧಾನಿ ಮೋದಿ ದೇಶದ ಆರ್ಥಿಕ ಸ್ಥಿತಿಯನ್ನು 20 ವರ್ಷದ ಹಿಂದಕ್ಕೆ ತಳ್ಳಿದ್ದಾರೆ ಎಂದು ಆಪಾದಿಸಿದರು.
ದೊಡ್ಡ ದೊಡ್ಡ ಮಾಲ್‌ಗಳ ಅಭಿವೃದ್ಧಿಯ ನಿಟ್ಟಿನಲ್ಲಿ ಪ್ರಧಾನಿ ಮೋದಿ ಕ್ಯಾಶ್‌ಲೆಸ್ ಬಗ್ಗೆ ಮಾತನಾಡುತ್ತಾರೆ. ಇದರಿಂದ ಬೀದಿ ಬದಿ ವ್ಯಾಪಾರಿಗಳು ಮತ್ತವರ ಕುಟುಂಬಗಳು ಬೀದಿಪಾಲಾಗಲಿವೆ. ದೇಶದ ಶೇ.12ರಷ್ಟು ಮಂದಿಯಲ್ಲಿ ಸ್ಮಾರ್ಟ್‌ಫೋನ್, ಇಂಟರ್‌ನೆಟ್ ಬಳಕೆಯ ಸೌಲಭ್ಯವಿಲ್ಲ. ಆದರೂ ಮೋದಿ ಆ್ಯಪ್ ‘ಭೀಮ್’ ಬಿಡುಗಡೆಗೊಳಿಸಿ ನಗೆಪಾಟಲಿಗೀಡಾಗಿದ್ದಾರೆ ಎಂದು ಐವನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಡಾ ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ನಝೀರ್ ಬಜಾಲ್, ಮಾಜಿ ಕಾರ್ಪೊರೇಟರ್ ನಾಗೇಂದ್ರ ಕುಮಾರ್, ನವೀನ್ ಸ್ಟೀವನ್, ಸುಧೀರ್ ಕಡೆಕಾರ್, ಆನಂದ್ ಸೋನ್ಸ್, ಸತೀಶ್ ಪೆಂಗಲ್ ಉಪಸ್ಥಿತರಿದ್ದರು.
ತಮಿಳ್ನಾಡಿಗೆ ವೀಕ್ಷಕ: ನೋಟು ಅಮಾನ್ಯದ ವಿರುದ್ಧ ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಸಲಿದೆ. ಈ ನಿಟ್ಟಿನಲ್ಲಿ ಎಐಸಿಸಿ ತಮಿಳ್ನಾಡಿಗೆ ವೀಕ್ಷಕರನ್ನಾಗಿ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜರನ್ನು ವೀಕ್ಷಕರನ್ನಾಗಿ ನೇಮಿಸಿದೆ.







