ಮೊಬೈಲ್ ಸ್ಫೋಟ ಬಾಲಕ ಬಲಿ
ವಿಲ್ಲುಪುರಂ, ಡಿ.31: ಕ್ರಿಸ್‌ಮಸ್ ರಜೆಯನ್ನು ಕಳೆಯಲು ತನ್ನ ಹೆತ್ತವರೊಂದಿಗೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ವನೂರ್ ಪಟ್ಟಣದ ಸಂಬಂಧಿಕರ ಮನೆಗೆ ಬಂದಿದ್ದ ಬೆಂಗಳೂರಿನ 15 ವರ್ಷದ ಬಾಲಕನೊಬ್ಬ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಅದು ಸ್ಫೋಟಗೊಂಡು ತೀವ್ರ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಮೃತ ಬಾಲಕ ಅಭಿಲಾಷ್ ಎಂದು ತಿಳಿದುಬಂದಿದೆ. ಅಭಿಲಾಶ್‌ನ ತಂದೆ ರಾಜೇಶ್ ಅವರು ಭಾರತೀಯ ವಾಯುಸೇನೆಯ ಮಾಜಿ ಮೆಡಿಕಲ್ ಅಸಿಸ್ಟೆಂಟ್, ತಾಯಿ ಲಲಿತಾ ಅವರು ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್. ಈ ದಂಪತಿಗೆ ಅಭಿಲಾಷ್ ಏಕೈಕ ಪುತ್ರನಾಗಿದ್ದನು. ಅವನು ಕೇಂದ್ರೀಯ ವಿದ್ಯಾಲಯದಲ್ಲಿ 10ನೆ ತರಗತಿಯಲ್ಲಿ ಕಲಿಯುತ್ತಿದ್ದ. ಅಭಿಲಾಷ್ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಬೆಂಕಿ ಹತ್ತಿಕೊಂಡಿತ್ತೆನ್ನಲಾಗಿದೆ. ಆತ ಫೋನನ್ನು ದೂರ ಎಸೆಯಲು ಯತ್ನಿಸಿದ್ದರೂ ಬೆಂಕಿಯು ಆತನ ಅಂಗಿಗೆ ಹಿಡಿದು ಕುತ್ತಿಗೆಯಿಂದ ತೊಡೆಯ ವರೆಗೆ ಸುಟ್ಟಿತ್ತು. ಆತನನ್ನು ಆಸ್ಪತ್ರೆಯೊಂದಕ್ಕೆ ದಾಖಲಿಸಲ್ಪಟ್ಟಿದ್ದರೂ ಗುರುವಾರ ಆತ ಮೃತ ಪಟ್ಟಿದ್ದಾನೆ ಎಂದು ತಿಳಿದುಬಂದಿದೆ.





