ಸುಪ್ರೀಂಕೋರ್ಟ್ ತೀರ್ಪಿನಿಂದ ಸರಕಾರಕ್ಕೆ 50 ಸಾವಿರ ಕೋಟಿ ರೂ.ಲಾಭ
ಹೊಸದಿಲ್ಲಿ, ಡಿ.31: ದೇಶದ ಪ್ರಮುಖ ಖನಿಜ ಸಂಪತ್ತುಗಳ ಗಣಿಗಾರಿಕೆಗೆ ಪರವಾನಿಗೆ ನೀಡುವ ಸಂಬಂಧ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳ ವಿಲೇವಾರಿಗೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿರುವುದು ಇದಕ್ಕೆ ಕಾರಣ. ಸುಪ್ರೀಂಕೋರ್ಟ್ ನ ಈ ತೀರ್ಪಿನಿಂದ ಕೇಂದ್ರಕ್ಕೆ 50 ಸಾವಿರ ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.
ಗಣಿಗಾರಿಕೆ ಹಂಚಿಕೆಗೆ ಏಕವಿಧಾನವನ್ನು ಅನುಸರಿಸುವ ಮುನ್ನ ಇದ್ದ ಎಲ್ಲ ಅರ್ಜಿಗಳನ್ನು ವಿಲೇವಾರಿ ಮಾಡಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಗಣಿ ಹಾಗೂ ಖನಿಜ ಕಾಯ್ದೆಗೆ ಕಳೆದ ವರ್ಷ ತಿದ್ದುಪಡಿ ತಂದು ಹರಾಜು ಮಾರ್ಗ ಅನುಸರಿಸಲು ನಿರ್ಧರಿಸಲಾಗಿತ್ತು. ಯುಪಿಎ ಸರಕಾರದ ಅವಧಿಯಲ್ಲಿ ಮಾಡಿದ್ದ ಕಲ್ಲಿದ್ದಲು ಗಣಿ ಹಂಚಿಕೆಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದ ಬಳಿಕ ಈ ತಿದ್ದುಪಡಿ ತರಲಾಗಿತ್ತು. ನೈಸರ್ಗಿಕ ಸಂಪತ್ತು ದೇಶದ ಆಸ್ತಿಯಾಗಿದ್ದು, ಅದನ್ನು ಸಮರ್ಪಕವಾಗಿ ಹರಾಜು ಮಾಡಬೇಕು ಎಂದು ಸೂಚಿಸಿತ್ತು.
ಕಬ್ಬಿಣ ಹಾಗೂ ಬಾಕ್ಸೈಟ್ ಗಣಿಗಾರಿಕೆ ಲೀಸಿಂಗ್ ನೀಡುವ ಸಂಬಂಧ ಕೇಂದ್ರದ ಬಳಿ ಇರುವ ಬಾಕಿ ಅರ್ಜಿಗಳ ಸಂಬಂಧ ವಿವಿಧ ಹೈಕೋರ್ಟ್‌ಗಳು ವಿರುದ್ಧ ತೀರ್ಪುಗಳನ್ನು ನೀಡಿರುವುದರಿಂದ ಸಮಸ್ಯೆ ಸೃಷ್ಟಿಯಾಗಿತ್ತು. ಕಾನೂನುಬದ್ಧವಾಗಿರುವ ಅರ್ಜಿಗಳಿಗೆ ಗಣಿಗಾರಿಕೆ ಮಂಜೂರು ಮಾಡಬಹುದು ಎಂದು ಕೆಲ ಹೈಕೋರ್ಟ್‌ಗಳು ತೀರ್ಪು ನೀಡಿದ್ದವು.
ಒಡಿಶಾದ ಸಂಬಾಲಪುರ ಜಿಲ್ಲೆಯಲ್ಲಿ ಉಕ್ಕು ಘಟಕವನ್ನು ನಿರ್ಮಿಸಲು ಉದ್ದೇಶಿಸಿರುವ ಭೂಷಣ್ ಪವರ್ ಆ್ಯಂಡ್ ಸ್ಟೀಲ್ ಲಿಮಿಟೆಡ್, 2012ರಲ್ಲಿ ಅರ್ಜಿ ಸಲ್ಲಿಸಿ, ಸುತ್ತಮುತ್ತಲ ಪ್ರದೇಶಗಳಲ್ಲಿ ಗಣಿಗಾರಿಕೆಗೆ ಅನುಮತಿ ನೀಡುವಂತೆ ಕೋರಿತ್ತು. ಇದೀಗ ಸುಪ್ರೀಂಕೋರ್ಟ್‌ನಲ್ಲಿ ಕಂಪೆನಿಗೆ ಪರವಾದ ಆದೇಶ ಬಂದಂತಾಗಿದೆ. 2 ಬ್ಲಾಕ್ ಗಣಿಗಾರಿಕೆಗೆ ಅನುಮತಿ ನೀಡಲು ರಾಜ್ಯ ಸರಕಾರ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಸುಪ್ರೀಂ ಆದೇಶ ನೀಡಿದೆ.





