ಕೊಂಡಕೂರು ಪರಿಸರದಲ್ಲಿ 43 ಡೆಂಗ್ ಪ್ರಕರಣ ಪತ್ತೆ
ಸಚಿವ ಪ್ರಮೋದ್ ಮಧ್ವರಾಜ್ ಭೇಟಿ: ಸೊಳ್ಳೆ ಪರದೆ ವಿತರಣೆ

ಉಡುಪಿ, ಡಿ.31: ಉಡುಪಿ ನಗರಸಭೆ ವ್ಯಾಪ್ತಿಯ ಕೊಡಂಕೂರು ನ್ಯೂ ಕಾಲನಿಯಲ್ಲಿ ಡೆಂಗ್ ಜ್ವರ ಉಲ್ಬಣಗೊಂಡಿದ್ದು, ಸುಮಾರು 43 ಮಂದಿ ಈ ಕಾಯಿಲೆಗೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಈ ಪ್ರದೇಶಕ್ಕೆ ಭೇಟಿ ನೀಡಿ ಸೊಳ್ಳೆಯ ಪರದೆಗಳನ್ನು ವಿತರಿಸಿದರು.
ಕೊಡಂಕೂರು ನ್ಯೂ ಕಾಲನಿಯಲ್ಲಿ 40 ಹಾಗೂ ರಾಜೀವನಗರದಲ್ಲಿ ಮೂರು ಡೆಂಗ್ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ಬಹುತೇಕ ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವು ಮನೆಯ ಎಲ್ಲ ಸದಸ್ಯರೂ ಈ ಕಾಯಿಲೆಗೆ ತುತ್ತಾಗಿರುವುದರಿಂದ ಆ ಮನೆಗಳಿಗೆ ಬೀಗ ಹಾಕಿರುವುದು ಕಂಡುಬಂತು. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.
ಡೆಂಗ್ ಬಾತ ಕೊಡಂಕೂರು ನ್ಯೂ ಕಾಲನಿಯ ಎಲ್ಲ ಮನೆಗಳಿಗೆ ಸಚಿವ ಪ್ರಮೋದ್ ಮಧ್ವರಾಜ್ ಭೇಟಿ ನೀಡಿ ಕಾಯಿಲೆ ಪೀಡಿತ ಆರೋಗ್ಯ ವಿಚಾರಿಸಿದರು. ಈ ಸಂದರ್ಭ ಕೆಲವು ಮನೆಯ ಎದುರಿನಲ್ಲಿ ಬಕೆಟ್, ಡ್ರಮ್‌ಗಳಲ್ಲಿ ಯಾವುದೇ ಮುಚ್ಚಳ ಇಲ್ಲದೆ ಸಂಗ್ರಹಿಸಿಟ್ಟಿದ್ದ ನೀರನ್ನು ಗಮನಿಸಿದ ಸಚಿವರು, ಡೆಂಗ್ ಕಾಯಿಲೆ ಹರಡುವ ಸೊಳ್ಳೆ ಶುದ್ಧ ನೀರಿನಲ್ಲಿ ಮೊಟ್ಟೆ ಇಡುವುದರಿಂದ ಈ ರೀತಿ ಇಡಬಾರದು ಎಂದು ಮನೆಯವರಿಗೆ ಸೂಚಿಸಿದರು. ಎಲ್ಲವೂ ನಗರಸಭೆಯೇ ಜವಾಬ್ದಾರಿ ವಹಿಸಲು ಆಗದು ಮನೆಯವರು ಈ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದರು.
*ನೀರಿನ ಸಮಸ್ಯೆಗೆ ಆಕ್ರೋಶ: ‘ಇಲ್ಲಿ ನೀರಿನದ್ದೇ ದೊಡ್ಡ ಸಮಸ್ಯೆ. ಸರಿಯಾಗಿ ನೀರು ಬರಲ್ಲ. ಒಮ್ಮೆಮ್ಮೆ ರಾತ್ರಿ 12ಗಂಟೆ, ಇಲ್ಲ ಬೆಳಗಿನ ಜಾವ 3ಗಂಟೆಗೆ ನೀರು ಬಿಡುತ್ತಾರೆ. ಮಲಗಿದ್ದವರು ಎದ್ದು ಡ್ರಮ್‌ಗಳಲ್ಲಿ ನೀರು ತುಂಬಿಸಿ ಇಡುತ್ತಿದ್ದೇವೆ. ಇದರಿಂದ ಸೊಳ್ಳೆ ಉತ್ಪತ್ತಿಯಾಗುತ್ತಿದೆ. ನೀರು ಸರಿ ಯಾದ ಸಮಯಕ್ಕೆ ಸರಬರಾಜು ಮಾಡುತ್ತಿದ್ದಾರೆ ಯಾವುದೇ ಸಮಸ್ಯೆ ಉಂಟಾಗಲ್ಲ’ ಎಂದು ಕೊಂಡಕೂರು ನ್ಯೂ ಕಾಲನಿಯ ನಾಗರಿಕರು ಸಚಿವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.
ಇದರಿಂದ ಕೆಂಡಮಂಡಲರಾದ ಸಚಿವರು, ನಗರಸಭೆ ಅಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಬಜೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹ ಇದ್ದರೂ ಡಿಸೆಂಬರ್ ತಿಂಗಳಲ್ಲಿಯೇ ಜನ ನೀರಿನ ಸಮಸ್ಯೆ ಎದುರಿಸಿದರೆ ಬೇಸಿಗೆಯಲ್ಲಿ ಯಾವ ಸ್ಥಿತಿ ಇರಬಹುದು ಎಂದ ಅವರು, ಕೂಡಲೇ ಇದಕ್ಕೆ ಕ್ರಮ ತೆಗೆದುಕೊಂಡು ನಿರಂತರ ನೀರು ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸಬೇಕೆಂದು ಪೌರಾಯುಕ್ತ ಡಿ.ಮಂಜುನಾಥಯ್ಯರಿಗೆ ಸೂಚಿಸಿದರು.
ಇದೇ ಪ್ರದೇಶದಲ್ಲಿ ಕೆಲವು ಮನೆಗಳಿಗೆ ನೀರು ಬರುತ್ತದೆ. ಇನ್ನು ಕೆಲವು ಮನೆಗಳಿಗೆ ನೀರು ಬರಲ್ಲ. ಈ ಸಮಸ್ಯೆಯನ್ನು ಸ್ಥಳೀಯರು ಸಚಿವರ ಗಮನಕ್ಕೆ ತಂದರು. ಕಾಲನಿಯ ಮಧ್ಯೆ ಇರುವ ನಗರಸಭೆಗೆ ಸಂಬಂಸಿದ ಬೃಹತ್ ತೆರೆದ ಬಾವಿಯನ್ನು ದುರಸ್ತಿ ಮಾಡಿ ಸ್ಥಳೀಯರು ನೀರು ಉಪಯೋಗಿಸುವಂತಾಗಲು ಕ್ರಮ ತೆಗೆದುಕೊಳ್ಳುವಂತೆ ಸಚಿವರು ಅಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಸದಸ್ಯರಾದ ಯುವರಾಜ್, ಜನಾರ್ದನ ಭಂಡಾರ್ಕರ್, ಮಲೇರಿಯಾ ನಿಯಂತ್ರಣಾಕಾರಿ ಡಾ.ಪ್ರೇಮಾನಂದ, ಗಣಪತಿ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಕೆಲವು ದಿನಗಳ ಹಿಂದೆ ಇಲ್ಲಿ ಸಾಕಷ್ಟು ಪ್ರಮಾಣದಲ್ಲಿ ಡೆಂಗ್ ಜ್ವರ ಕಾಣಿಸಿಕೊಂಡಿದ್ದು, ಈಗಾಗಲೇ ಜಿಲ್ಲಾಕಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಕಾರಿಗಳಿಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆ. ಸದ್ಯಕ್ಕೆ ರೋಗ ನಿಯಂತ್ರಣದಲ್ಲಿದೆ. ಕೊಂಡಕೂರು, ರಾಜೀವನಗರ, ಹನುಮಂತ ನಗರ, ವಿಷ್ಣುಮೂರ್ತಿ ನಗರಗಳಲ್ಲಿ ಸೊಳ್ಳೆ ಪರದೆಯನ್ನು ಹಂಚಲಾಗುತ್ತಿದೆ.
ಪ್ರಮೋದ್ ಮಧ್ವರಾಜ್,
ಸಚಿವರು.
ಡೆಂಗ್ ಜ್ವರ ಹರಡುವ ಸೊಳ್ಳೆಯು ಶುದ್ಧ ನೀರಿನಲ್ಲಿ ಮೊಟ್ಟೆ ಇಡುತ್ತದೆ ಹಾಗೂ ಅದು ಹಗಲು ಹೊತ್ತಿನಲ್ಲಿ ಕಚ್ಚುತ್ತದೆ. ಹಾಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಉಡುಪಿ ಜಿಲ್ಲೆಗೆ 18 ಸಾವಿರ ಸೊಳ್ಳೆ ಪರದೆಗಳನ್ನು ಸರಬರಾಜು ಮಾಡಿದ್ದು, ಅದನ್ನು ಇಲ್ಲಿ ಸಾಂಕೇತಿಕವಾಗಿ ವಿತರಿಸುವ ಮೂಲಕ ಚಾಲನೆ ನೀಡಲಾಗಿದೆ.
ಡಾ.ಪ್ರೇಮಾನಂದ,
ಮಲೇರಿಯಾ ನಿಯಂತ್ರಣಾಕಾರಿ.







