ಎಡಿಎಂಕೆಯಲ್ಲಿ ಜಯಾ-ಎಂಜಿಆರ್‌ಗಿಂತ ಯಾರೂ ದೊಡ್ಡವರಲ್ಲ. ಶಶಿಕಲಾ
ಚೆನ್ನೈ, ಡಿ.31: ಜಯಲಲಿತಾರ ಪೂರ್ವಾರ್ಜಿತ ಆಸ್ತಿಯನ್ನು ಮುಂದಕ್ಕೊಯ್ಯುವ ಪ್ರತಿಜ್ಞೆ ಕೈಗೊಂಡಿರುವ ಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ, ಪಕ್ಷದ ಸ್ಥಾಪಕ ಎಂ.ಜಿ. ರಾಮಚಂದ್ರನ್, ದ್ರಾವಿಡ ಸಿದ್ಧಾಂತಿ ಸಿ.ಎನ್. ಅಣ್ಣಾದುರೈ ಹಾಗೂ 'ಅಮ್ಮ' ಹೊರತಾಗಿ ಬೇರಾರಿಗೂ ಪಕ್ಷದಲ್ಲಿ ಪ್ರಾಧಾನ್ಯ ನೀಡುವುದಿಲ್ಲವೆಂದು ಇಂದು ಹೇಳಿದ್ದಾರೆ.
ಪಕ್ಷದ ವರಿಷ್ಠೆಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪದಾಧಿಕಾರಿಗಳನ್ನುದ್ದೇಶಿಸಿ ಮಾಡಿದ ಪ್ರಥಮ ಔಪಚಾರಿಕ ಭಾಷಣದಲ್ಲಿ, ಅಮ್ಮನ ಕಾಲದಲ್ಲಿದ್ದಂತೆಯೇ ಎಡಿಎಂಕೆ ಮುಂದುವರಿಯಲಿದೆ. ಆಗ ಪಕ್ಷದಲ್ಲಿ ಸೇನೆಯಂತಹ ಶಿಸ್ತು ರೂಢಿಸಲಾಗಿತ್ತು ಎಂದು ಚಿನ್ನಮ್ಮ ತಿಳಿಸಿದರು.
ಜಾತಿ-ಮತಗಳಿಂದಾಚೆಗೆ ನೋಡಿದ್ದ ಈ ಮಹಾನ್ ನಾಯಕರ ಹೆಜ್ಜೆಗಳಲ್ಲೇ ಪಕ್ಷವು ಸಾಗಲಿದೆಯೆಂದು ಅವರು ಹೇಳಿದರು.
ಶಶಿಕಲಾಗೆ ಈ ಉನ್ನತ ಹುದ್ದೆ ನೀಡುವ ಬಗ್ಗೆ ಕೆಲವು ಪ್ರತಿಭಟನೆಯ ಗೊಣಗಾಟಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಹೊರಟಿದೆ. ಜಯಲಲಿತಾರ ಬಗ್ಗೆ ಭಾರೀ ಭಕ್ತಿಭಾವ ತೋರಿಸಿದ ಶಶಿಕಲಾ, ಅಮ್ಮನ ರಾಜಕೀಯ ಪಾಠಗಳು ಹಾಗೂ ಹೆಜ್ಜೆ ಗುರುತುಗಳನ್ನು ತಾವು ವೇದ ವಾಕ್ಯಗಳೆಂದು ಅನುಸರಿಸೋಣ. ಅಮ್ಮ ರೂಪ ನೀಡಿದ ಈ ಚಳವಳಿ ಜನರ ಚಳವಳಿಯಾಗಿದೆ. ಇದು ಜನತೆಯ ಸರಕಾರ. ತಮ್ಮ ಪ್ರಯಾಣ ಅಮ್ಮ ಹಾಕಿಕೊಟ್ಟ ದಾರಿಯಲ್ಲಿ ಸಾಗಲಿದೆ ಎಂದರು.
ಪಕ್ಷದ ಕಾರ್ಯಕರ್ತರಿಗೆ ಭಡ್ತಿ ನೀಡುವಲ್ಲಿ ಜಯಲಲಿತಾ ಅನುಸರಿಸಿದ್ದ ಮಾನದಂಡವೇ ಮುಂದುವರಿಯಲಿದೆ. ತಾವು ಅದರಿಂದ ಎಳ್ಳಷ್ಟೂ ಅತ್ತಿತ್ತ ಸರಿಯುವುದಿಲ್ಲ ಎಂದವರು ಹೇಳಿದರು.





